ಕಂಬಳದ ರೇಸಲ್ಲಿ ಗೆದ್ದ 16 ಗ್ರಾಂ ಚಿನ್ನದ ಪದಕ ಕಂಬಳದ ಕೋಣ ಸಾಕಿದ ವೀರಪ್ಪ ಅವರ ಕೊರಳಿಗೆ

ಮಂಗಳೂರು: ಕಂಬಳದ ರೇಸಿನಲ್ಲಿ ಚಿನ್ನದ ಪದಕ ಗೆಲ್ಲುವುದು ಅಂದರೆ ಕೋಣಗಳ ಯಜಮಾನರಿಗೆ ಅದೊಂದು ರೀತಿಯ ಹೆಮ್ಮೆಯ ಸಂಗತಿ. ಆದರೆ ತಾವು ಗೆದ್ದ ಪದಕಕ್ಕಿಂತ, ತಮ್ಮೊಂದಿಗೆ ದುಡಿದ ವ್ಯಕ್ತಿಯ ಸಂಕಷ್ಟ ದೊಡ್ಡದು ಎಂದು ತಿಳಿದು ತಾವು ಗೆದ್ದ ಚಿನ್ನದ ಪದಕವನ್ನೇ ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಸಿಬ್ಬಂದಿಗೆ ನೀಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪದವು ಕಾನಡ್ಕ ತಂಡ ಈ ಮಾನವೀಯತೆಯನ್ನು ಮೆರೆದಿದ್ದು, ಎಲ್ಲರ ಮನ ಗೆದ್ದಿದ್ದಾರೆ.
Sponsoredಮಂಗಳೂರಿನ ಶಕ್ತಿನಗರದ ಪದವು ಕಾನಡ್ಕ ತಂಡದ ಫ್ಲೇವಿ ಡಿಸೋಜಾ ಅವರ ಕೋಣಗಳು ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕಂಬಳದಲ್ಲಿ ಹಗ್ಗ ಕಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದ ತಂಡ. ಇವರು ತಮ್ಮ ವಿಜಯಕ್ಕೆ ದೊರೆತ ಚಿನ್ನದ ಪದಕವನ್ನು ಬಂಟ್ವಾಳ ತಾಲೂಕಿನ ಕೊಳತ್ತಮಜಲು ನಿವಾಸಿ ವೀರಪ್ಪ ಅವರಿಗೆ ನೀಡಿದ್ದಾರೆ.
ವೀರಪ್ಪ ಅವರು ಸುದೀರ್ಘ ಕಾಲ ಪದವು ಕಾನಡ್ಕ ತಂಡದಲ್ಲಿ ಕೋಣಗಳ ಆರೈಕೆ ಮಾಡುತ್ತಿದ್ದರು. ಕಳೆದ ವರ್ಷವೂ ತಂಡದ ಜೊತೆ ಕೆಲಸ ಮಾಡುತ್ತಿದ್ದ ಇವರಿಗೆ ನಂತರ ಅನಾರೋಗ್ಯ ಕಾಡಿತ್ತು. ಈ ಬಂಗಾರದ ಪದಕದ ತೂಕ 16 ಗ್ರಾಂ ಆಗಿದ್ದು, ಇದರ ಮೌಲ್ಯ ಸುಮಾರು 2.30ಲಕ್ಷ ಬೆಲೆ ಆಗಿದೆ.
ವರ್ಷಗಳ ಕಾಲ ಪ್ರೀತಿಯಿಂದ, ಶ್ರಮಪಟ್ಟು ಕೆಲಸ ಮಾಡಿದ ವೀರಪ್ಪ ಅವರ ಸೇವೆಯನ್ನು ಮಾಲಕರು ಮರೆತಿಲ್ಲ. ಅವರ ಅನಾರೋಗ್ಯದ ಸಂದರ್ಭದಲ್ಲಿ ಮಾನವೀಯ ಕಾಳಜಿಯಿಂದ ಗೆದ್ದ ಚಿನ್ನದ ಪದಕವನ್ನು ಅವರಿಗೆ ನೀಡಿದ್ದಾರೆ. ತಂಡದ ಮಾಲೀಕರು ನೀಡಿರುವ ವಿಶೇಷ ಗೌರವ ಹಾಗೂ ಕಾಣಿಕೆಯು ಗ್ರಾಮೀಣ ಕ್ರೀಡೆ ಮತ್ತು ಸಂಸ್ಕೃತಿಯ ಮೇಲಿನ ಕಾಳಜಿಯನ್ನು ಎತ್ತಿ ತೋರಿಸುತ್ತದೆ.
ಪದವು ಕಾನಡ್ಕ ತಂಡವು ಈ ರೀತಿ ಮಾನವೀಯ ಕೆಲಸ ಮಾಡುವುದು ಇದೇ ಮೊದಲಲ್ಲ. 2024ರಲ್ಲಿ ಬಂಟ್ವಾಳದ ನಾವೂರು ಕಂಬಳದಲ್ಲಿ ಪದವು ಕಾನಡ್ಕದ ಪ್ರಸಿದ್ಧ ಕೋಣ ದೂಜ ಇದ್ದ ಜೋಡಿ ಪ್ರಥಮ ಬಹುಮಾನ ಪಡೆದಿತ್ತು. ಆಗ ಲಭಿಸಿದ್ದ ಚಿನ್ನದ ಪದಕವನ್ನು ಕಂಬಳದ ಕೆರೆಯಲ್ಲಿ ಬಿದ್ದು ಕಾಲು ಮುರಿತ ಉಂಟಾಗಿದ್ದ ನಾವೂರು ಸಾವ್ಯ ಗಂಗಯ್ಯ ಪೂಜಾರಿ ಅವರಿಗೆ ನೀಡಿದ್ದರು.




