ಎರಡು ತಿಂಗಳ ಮಗುವಿನ ಹೊಟ್ಟೆಯಲ್ಲಿ ಭ್ರೂಣ; ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿ
ಬಳ್ಳಾರಿ: ಬಿಎಂಸಿಆರ್‌ಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (ವಿಮ್ಸ್) ವೈದ್ಯರ ತಂಡವು ಎರಡು ತಿಂಗಳ ಗಂಡು ಮಗುವಿನ ಹೊಟ್ಟೆಯಲ್ಲಿದ್ದ ಭ್ರೂಣವನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದು ಮಗುವಿನ ಜೀವ ನೀಡಿರುವ ಘಟನೆ ನಡೆದಿದೆ.
Sponsoredಅತ್ಯಂತ ಅಪರೂಪ ಎನಿಸಿಕೊಂಡಿರುವ ʼಫೀಟಸ್ ಇನ್ ಫೀಟುʼ ಪ್ರಕರಣ ಇದಾಗಿದೆ.
ಎರಡು ತಿಂಗಳ ಹಿಂದೆ ಇದೇ ಆಸ್ಪತ್ರೆಯಲ್ಲಿ ಮಗು ಜನಿಸಿದೆ. ಮಗು ಗರ್ಭದಲ್ಲಿರುವಾಗಲೇ ವೈದ್ಯರು ಈ ಅಪರೂಪದ ಸಮಸ್ಯೆಯನ್ನು ಪತ್ತೆ ಹಚ್ಚಿದ್ದರು. ನಂತರ ಜನನದ ನಂತರ ಅಗತ್ಯ ತಪಾಸಣೆ ಮಾಡಿ, ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಪ್ರಕಟಣೆ ಹೊರಡಿಸಲಾಗಿದೆ.
ಏನಿದು ‘ಫೀಟಸ್ ಇನ್ ಫೀಟು’?: ವೈದ್ಯಕೀಯ ವಿಜ್ಞಾನದ ಪ್ರಕಾರ, ಇದು ತಾಯಿಯ ಗರ್ಭದಲ್ಲಿ ಬೆಳವಣಿಗೆ ಹೊಂದದ ಅವಳಿ ಭ್ರೂಣವು ಇನ್ನೊಂದು ಮಗುವಿನ ದೇಹದೊಳಗೆ ಸೇರಿಕೊಳ್ಳುವ ಅತ್ಯಂತ ಅಪರೂಪದ ಜನ್ಮಜಾತ ಸ್ಥಿತಿ. ಸುಮಾರು ಐದು ಲಕ್ಷ ಜನನಗಳಲ್ಲಿ ಒಂದರಲ್ಲಿ ಮಾತ್ರ ಇಂತಹ ಪ್ರಕರಣಗಳು ಕಂಡುಬರುತ್ತವೆ. ಸರಿಯಾದ ಸಮಯದಲ್ಲಿ ಪತ್ತೆಹಚ್ಚಿ ಶಸ್ತ್ರಚಿಕಿತ್ಸೆ ನಡೆಸಿದರೆ ಮಗುವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯ ಎನ್ನುತ್ತಾರೆ ತಜ್ಞ ವೈದ್ಯರು.
ಕಳೆದ ವರ್ಷ ಹುಬ್ಬಳ್ಳಿಯಲ್ಲಿಯೂ ಈ ರೀತಿಯ ಘಟನೆ ಬೆಳಕಿಗೆ ಬಂದಿತ್ತು. 14 ದಿನಗಳ ನವಜಾತ ಶಿಶುವಿನ ಹೊಟ್ಟೆಯಲ್ಲಿದ್ದ ಭ್ರೂಣವನ್ನು ಇಲ್ಲಿನ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವೈದ್ಯರು ಯಶಸ್ವಿಯಾಗಿ ಹೊರೆತೆಗೆದು ಮಗುವಿನ ಜೀವ ಉಳಿಸಿದ್ದರು.




