ಇದು ಒಂದು ತೆರೆದರೆ ಇನ್ನೊಂದು ತೆರೆಯುವ ಒಪ್ಪಂದದ ವಿಚಾರ. ಕಥೆ ಬೆಂಗಳೂರಿನ ಚಿಕ್ಕಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುರುವಾಗುತ್ತದೆ. ಅಲ್ಲಿ ನಡೆದ ಅಪಹರಣ ಮತ್ತು ಕೊಲೆ ಪ್ರಕರಣ ಇಡೀ ನಗರವನ್ನು ನಡುಗಿಸಿತ್ತು.
Sponsoredಅದು 2001ರಲ್ಲಿ ಚಿಕ್ಕಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಅಪಹರಣ ಮತ್ತು ಹಣಕ್ಕಾಗಿ ಬೇಡಿಕೆ ಪ್ರಕರಣ. ಈ ಪ್ರಕರಣದಲ್ಲಿ ಒಂದು ಕೊಲೆಯೂ ಸೇರಿತ್ತು. ಕೊಲೆ ನಡೆದು ಮೂರು ವರ್ಷದ ಬಳಿಕ, ಜುಲೈ 12, 2004ರಲ್ಲಿ ಆರೋಪಿ ಶಂಕರ್ ಆರ್ಮುಗಂಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಒಂದು ಜೀವಾವಧಿ ಶಿಕ್ಷೆ ಮತ್ತು 10,000 ರೂ.ದಂಡ ವಿಧಿಸಿ ತೀರ್ಪು ನೀಡಿತು. ಈ ಕೇಸಿನ ಪ್ರಮುಖ ಸೂತ್ರಧಾರ ಎ. ಶಂಕರ್ ಆರ್ಮುಗಂ. ಆತ ಜೈಲಲ್ಲಿ ಇದ್ದುಕೊಂಡೇ ಸುದೀರ್ಘ ಕಾನೂನು ಹೋರಾಟ ನಡೆಸಿ ಈ ಪ್ರಕರಣದಿಂದ ಹೊರಗೆ ಬರಲು ಪ್ರಯತ್ನಿಸಿದ. ಆದರೆ ಕೋರ್ಟು ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಆತ ಹೈಕೋರ್ಟ್ ಮೆಟ್ಟಲೇರಿದ. ಪ್ರಯೋಜನವಾಗಲಿಲ್ಲ. ನಂತರ ಆತ ಸುಪ್ರೀಂ ಕೋರ್ಟ್ ತಲುಪಿದ. ಅಲ್ಲೂ ಗುಣ ಕಾಣಲಿಲ್ಲ.
ಎಲ್ಲೂ ಆತನಿಗೆ ಮುಕ್ತಿ ಸಿಕ್ಕದೆ ಬಿಡುಗಡೆ ಭಾಗ್ಯ ಸಿಗಲೇ ಇಲ್ಲ. ಆತನ ಪತ್ನಿ ಪತಿಯನ್ನು ಬಿಡಿಸಲು ಸಾಕಷ್ಟು ಓಡಾಡಿದಳು. ಆದರೆ ಪ್ರಯೋಜನವಾಗಲಿಲ್ಲ. ತನಗೆ ಜೈಲೇ ಪರ್ಮನೆಂಟ್ ಅಂತ ಆತ ಪರಪ್ಪನ ಅಗ್ರಹಾರ ಜೈಲಿನ ಕತ್ತಲೆ ಕೋಣೆಯನ್ನು ತನ್ನ ಶಾಶ್ವತ ವಿಳಾಸವನ್ನಾಗಿ ಮಾಡಿಕೊಳ್ಳಬೇಕು, ಬೇರೆ ವಿಧಿಯಿಲ್ಲ ಅಂದುಕೊಂಡಾಗ – ಜೈಲರ್ ಗೆ ಹಿತವಾಗಿ ಬೀಸಿದ್ದು ಸೆರಗು!
ಕಪ್ಪು- ಕಾಣಿಕೆ ಮತ್ತು ಕಾಮದ ಬಾಗಿಲು
ಪರಿಸ್ಥಿತಿ ಹೀಗಿರುವಾಗ ಪರಪ್ಪನ ಅಗ್ರಹಾರ ಜೈಲಿಗೆ ಮುಖ್ಯ ಅಧೀಕ್ಷಕರಾಗಿ ಬಂದಿಳಿದವರು ಎಂ. ಸೋಮಶೇಖರ್ ಎಂಬ ಪೊಲೀಸ್ ಅಧಿಕಾರಿ. ಅವರಿಗೆ ಬಳಿಕ ಪ್ರಮೋಷನ್ ಆಗಿ ಅವರು ಡಿಐಜಿ ಆದರು. ಇಲ್ಲಿಂದಲೇ ಜೈಲಿನ ಕಪ್ಪು ಕೊನೆಯ ಒಳಗಿನಿಂದ ಕಾಮ- ಅಕ್ರಮದ ಜುಗಲ್ಬಂದಿ ಶುರುವಾಗಿದ್ದು.
ಸಹಜವಾಗಿ ಖೈದಿ ಶಂಕರ್ ಆರ್ಮುಗಂನನ್ನು ಜೈಲಿನಿಂದ ಆಚೆ ತರಲು ಆತನ ಪತ್ನಿ ಒದ್ದಾಡುತ್ತಿದ್ದಳು. ಆಕೆಯ ಅಸಹಾಯಕತೆ ಮತ್ತು ವಯಸ್ಸನ್ನು ಬಂಡವಾಳ ಮಾಡಿಕೊಂಡ ಜೈಲಿನ ಎಸ್ಡಿಎ ಸಿಬ್ಬಂದಿ ಶ್ರೀಕಾಂತ್, ಜೈಲಾಧಿಕಾರಿ ಸೋಮಶೇಖರ್ ಜೊತೆ ಒಂದು ರಹಸ್ಯ ಡೀಲ್ ಕುದುರಿಸಿದರು. ಗಂಡನಿಗೆ ಜೈಲಿನಿಂದ ಮುಕ್ತಿ ಬೇಕಾದರೆ ಲಕ್ಷಾಂತರ ರೂಪಾಯಿ ಲಂಚ ನೀಡಬೇಕು ಎಂಬ ಸಣ್ಣ(!) ಷರತ್ತು ವಿಧಿಸಲಾಯಿತು. ಆದರೆ, ಈ ಡೀಲ್ ಅಷ್ಟಕ್ಕೆ ನಿಲ್ಲಲಿಲ್ಲ. ಜೀವಾವಧಿ ಶಿಕ್ಷೆಗೆ ಒಳಗಾದ ಖೈದಿಯನ್ನು ಬಿಡಿಸಿ ತರಲು ಕೇವಲ ದುಡ್ಡು ಕೊಟ್ಟರೆ ಸಾಕಾಗುವುದಿಲ್ಲ. ಅದಕ್ಕಿಂತಲೂ ಬೆಳೆಬಾಳುವ, ಅಮೂಲ್ಯವಾದದ್ದು ಬೇಕಾಗುತ್ತದೆ ಎಂದು ಖದೀಮರು ಸೂಚ್ಯವಾಗಿ ತಿಳಿಸಿದ್ದರು. ಹಾಗೆ ಜೈಲಾಧಿಕಾರಿ ಸೋಮಶೇಖರ್ ಕಣ್ಣು ಬಿದ್ದಿದ್ದು ಕೈದಿಯ ಪತ್ನಿಯ ಮೇಲೆ ಬಿದ್ದಿತ್ತು. ಲಂಚದ ಹಣದ ಜೊತೆಗೆ, ಕೈದಿಯ ಪತ್ನಿಯನ್ನು ವಿಡಿಯೋ ಕಾಲ್ ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ಲೈಂಗಿಕ ಶೋಷಣೆಗೆ ಒಳಪಡಿಸಲಾಯಿತು ಎನ್ನುವ ಆರೋಪ ಇದೀಗ ಬಹುಪಾಲು ಸಾಬೀತಾದಂತಿದೆ. ಹಾಗೆ ಕಾಮದ ಬಾಗಿಲು ತೆರೆದುಕೊಂಡಾಗ ಜೈಲಿನ ಡೋರ್ ಓಪನ್ ಆಗಿದೆ.
ನವೆಂಬರ್ 13, 2018 ರಲ್ಲಿ ಸುಪ್ರೀಂ ಕೋರ್ಟ್ ಆದೇಶ ಪ್ರತಿ ಒಂದು ಬಂತು. ಕೇವಲ 10,000 ರೂ.ದಂಡ ಹಾಕಿ ಶಂಕರ್ ನನ್ನು ಸುಪ್ರೀಂ ಕೋರ್ಟು ಬೆಂಗಳೂರು ಸೆಂಟ್ರಲ್ ಜೈಲಿನಿಂದ ಬಿಡುಗಡೆ ಮಾಡಿತು. ಆದರೆ ಆ ದಾಖಲೆಯ ಹಿಂದಿನ ಅಸಲಿ ಕಥೆ ಬೇರೆಯೇ ಇತ್ತು. ಅಲ್ಲಿಂದ ಸುಮಾರು 8 ವರ್ಷಗಳ ಮೌನ ಆವರಿಸಿತು. ಶಂಕರ್ ಮನೆಯೂಟ ನಿರಾತಂಕವಾಗಿ ಮುಂದುವರೆಯಿತು. ಅಲ್ಲಿಂದ ದಿನಗಳು ಉರುಳಿದವು. ಸೋಮಶೇಖರ್ ಅವರಿಗೆ ಬಡ್ತಿ ಸಿಕ್ಕು ಜೈಲು ಇಲಾಖೆಯ ಡಿಐಜಿ ಹುದ್ದೆಗೇರಿದರು. ಇಲ್ಲಿಯ ತನಕ ಖೈದಿ, ಆತನ ಪತ್ನಿ, ಜೈಲರ್ – ಎಲ್ಲರಿಗೂ ತಾವoದು ಕೊಂಡದ್ದನ್ನು ಪಡೆದ ಬಗ್ಗೆ ಖುಷಿಯ ದಿನಗಳಲ್ಲಿ ಕಳೆದರು.
ಸುಪ್ರೀಂ ಕೋರ್ಟ್ಗೇ ‘ಫೋರ್ಜರಿ’
ಆದರೆ, ಮೇ 2026ರಲ್ಲಿ ಬಂದಿಖಾನೆ ಇಲಾಖೆಯ ಮಹಾನಿರ್ದೇಶಕರಾದ ಆಲೋಕ್ ಕುಮಾರ್ ಅವರ ಮೇಜಿನ ಮೇಲೆ ಒಂದು ಅನಾಮಧೇಯ ಪತ್ರ ಬಂದು ಬಿತ್ತು. ಆ ಪತ್ರ ಇಡೀ ಹಗರಣದ ಕಚ್ಚಾ ಕಟಾವು ವಿವರಗಳನ್ನು ಬಿಚ್ಚಿಟ್ಟಿತ್ತು. ತಕ್ಷಣವೇ ಹಳೆಯ ದಾಖಲೆಗಳನ್ನು ಕೆದಕಿದಾಗ ಸುಪ್ರೀಂ ಕೋರ್ಟ್ ಹೆಸರಿನಲ್ಲಿ ನಡೆದಿದ್ದ ಮಹಾ ಮೋಸ ಬಯಲಾಯಿತು.
ಕಾಸು ಮತ್ತು ‘ಕಾಮ’ಗಾರಿ ಬಯಸಿ ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಸ್ಕೆಚ್ ಇದೆoದು ಬಯಲಾಯಿತು. ಜೈಲು ಸಿಬ್ಬಂದಿ ಶ್ರೀಕಾಂತ್ ನೆರವಿನಿಂದ ದೆಹಲಿಯ ಸುಪ್ರೀಂ ಕೋರ್ಟ್ನ ನಕಲಿ ಆದೇಶದ ಪ್ರತಿಯೊಂದನ್ನು ಸೃಷ್ಟಿಸಲಾಗಿತ್ತು. ಅತ್ಯುನ್ನತ ನ್ಯಾಯಾಲಯದ ನಕಲಿ ಸಹಿ, ಫೋರ್ಜರಿ ಸೀಲುಗಳನ್ನು ಬಳಸಿ ಪತ್ರವೊಂದನ್ನು ಸಿದ್ಧಪಡಿಸಲಾಗಿತ್ತು.
ಈ ನಕಲಿ ದಾಖಲೆ ಕೈ ಸೇರಿದ ತಕ್ಷಣ, ಮುಖ್ಯ ಅಧೀಕ್ಷಕ ಸೋಮಶೇಖರ್ ಯಾವುದೇ ಮರು-ಪರಿಶೀಲನೆ ನಡೆಸದೆ, ಹಿರಿಯ ಅಧಿಕಾರಿಗಳ ಗಮನಕ್ಕೂ ತರದೆ ಜೈಲು ಬಾಗಿಲನ್ನು ವಿಶಾಲವಾಗಿ ತೆರೆದು ಬಿಟ್ಟರು. ಕೊಲೆಗಡುಕ ಶಂಕರ್ ರಾಜಾರೋಷವಾಗಿ ಜೈಲಿನಿಂದ ಆಚೆ ನಡೆದು ಬಿಟ್ಟಿದ್ದ.
ಆಲೋಕ್ ಕುಮಾರ್ ಅವರಿಗೆ ಬಂದ ಅನಾಮಧೇಯ ಪತ್ರದ ಮೇರೆಗೆ ಪರಪ್ಪನ ಅಗ್ರಹಾರ ಪೊಲೀಸರು ತ್ವರಿತ ತನಿಖೆ ನಡೆಸಿದ್ದಾರೆ. ಆಗ ಕಾಮಕ್ಕಾಗಿ ಜೈಲು ಬಾಗಿಲು ತೆರೆದ ಕಾಂಪ್ರಮೈಸ್ ಗೊತ್ತಾಗಿದೆ. 8 ವರ್ಷಗಳ ಕಾಲ ಆಚೆ ಹೆಂಡತಿಯ ಜತೆ ಜಾಲಿಯಾಗಿದ್ದ ಕೊಲೆ ಆರೋಪಿ ಶಂಕರ್ ಮತ್ತೆ ಜೈಲಿನ ಕತ್ತಲೆ ಕೋಣೆಗೆ ಸರಿದಿದ್ದಾನೆ.
ಅಂದು ಕಾಮದ ಆಸೆಗೆ ಬಿದ್ದು ಕೈದಿಗೆ ಜೈಲು ಬಾಗಿಲು ಓಪನ್ ಮಾಡಿಕೊಟ್ಟಿದ್ದ ಡಿಐಜಿ ಸೋಮಶೇಖರ್, ಇಂದು ತಾನೇ ಸ್ವತಃ ಜೈಲು ಸೇರಿ ಕಂಬಿ ಎಣಿಸುತ್ತಿದ್ದಾನೆ! ಇವರ ಜೊತೆಗೆ ಲಂಚ ಪಡೆದ ಜೈಲು ಸಿಬ್ಬಂದಿ ಶ್ರೀಕಾಂತ್ ಹಾಗೂ ಕೈದಿಯ ಪತ್ನಿಯೂ ಪೊಲೀಸರ ವಶದಲ್ಲಿದ್ದಾಳೆ.
ವಂಚನೆಯ ಮೂಲಕ ತೆರೆದುಕೊಳ್ಳುವ ಅವಕಾಶಗಳ ಬಾಗಿಲು ತಂತಾನೇ ಮುಚ್ಚಿಕೊಳ್ಳುತ್ತವೆ ಅನ್ನೋದು ಇದಕ್ಕೇನಾ?
ಬರಹ: ಸುದರ್ಶನ್ ಪ್ರವೀಣ್




