ಗೋಕರ್ಣದ ಪ್ರಸಿದ್ಧ ಮಹಾಗಣಪತಿ ದೇವಸ್ಥಾನದಲ್ಲಿ, ಗಣೇಶನ ಪ್ರಾಚೀನ ಶಿಲಾ ಮೂರ್ತಿಯಲ್ಲಿ ಸವೆತ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಯಲು ಮುಜರಾಯಿ ಇಲಾಖೆಯು ದೇವರನ್ನು ಸ್ಪರ್ಶ ಮಾಡಿ ದರ್ಶನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ ತಾಲೂಕಿನ ಪುರಾಣ ಪ್ರಸಿದ್ಧ ಗೋಕರ್ಣದ ಮಹಾಗಣಪತಿ ದೇವಸ್ಥಾನದಲ್ಲಿ ಇದುವರೆಗೂ ಮಹಾಗಣಪತಿಯನ್ನು ಸ್ಪರ್ಶಿಸಿ ದೇವರನ್ನು ದರ್ಶನ ಮಾಡುವಂತಹ ಅವಕಾಶವಿತ್ತು ಆದರೆ ಇದೀಗ ಈ ಮೂರ್ತಿಯಲ್ಲಿ ಸವೆತ ಕಂಡು ಬಂದ ಕಾರಣ ಇದನ್ನು ತಡೆಯಲು ರಾಜ್ಯದ ಮುಜರಾಯಿ ಇಲಾಖೆಯು ದೇವರನ್ನು ಸ್ಪರ್ಶಿಸಿ ದರ್ಶನ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಈ ಹೊಸ ನಿಯಮದ ಅಡಿಯಲ್ಲಿ, ಭಕ್ತರು ಇನ್ನು ಮುಂದೆ ಗಣಪತಿ ಮೂರ್ತಿಯನ್ನು ಮುಟ್ಟಿ ಪೂಜೆ ಸಲ್ಲಿಸುವಂತಿಲ್ಲ. ಮತ್ತು ‘ಕೊಟ್ಟೆ ಕಣಜ’ದಂತಹ ವಿಶೇಷ ಸೇವೆಗಳನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಮೂರ್ತಿಗೆ ಹಾನಿಯಾಗುತ್ತಿರುವುದೇಕೆ?
ಗೋಕರ್ಣದ ಪ್ರಸಿದ್ಧ ಮಹಾಬಲೇಶ್ವರ ದೇವಸ್ಥಾನದ ‘ಆತ್ಮಲಿಂಗ’ ದರ್ಶನ ಪಡೆಯುವ ಮುನ್ನ, ಭಕ್ತರು ಮೊದಲು ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ, ಈ ಐತಿಹಾಸಿಕ ದ್ವಿಭುಜ ಗಣಪತಿಗೆ ಪೂಜೆ ಸಲ್ಲಿಸುವುದು ಅನಾದಿ ಕಾಲದ ವಾಡಿಕೆ. ಆದರೆ, ಪ್ರತಿನಿತ್ಯ ಸಾವಿರಾರು ಭಕ್ತರು ಮೂರ್ತಿಯನ್ನು ಸ್ಪರ್ಶಿಸಿ ಪೂಜೆ ಮಾಡುತ್ತಿದ್ದರಿಂದ, ಗಣಪತಿಯ ಶಿಲಾ ಮೂರ್ತಿಯ ಕೈ, ಭುಜ ಹಾಗೂ ಎದೆ ಭಾಗವು ತೀವ್ರವಾಗಿ ಸವಕಳಿಯಾಗುತ್ತಿದೆ.




