ಶನಿವಾರ, 24 ಅಕ್ಟೋಬರ್ 2026

ನೀಟ್ ಪ್ರತಿಭಟನೆಗೆ ಇಳಿದ ಅಣ್ಣಾ ಹಜಾರೆ: ಮೌನಾಂದೋಲನ ಮೂಲಕ ಹೋರಾಟಕ್ಕೆ!

ಅಹಿಲ್ಯಾನಗರ: ದಿಲ್ಲಿ ವಿದ್ಯಾರ್ಥಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಬೆಂಬಲವಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಗುರುವಾರ ಮಹಾರಾಷ್ಟ್ರದ ಅಹಿಲ್ಯಾನಗರದಲ್ಲಿ ಎರಡು ಗಂಟೆ ಕಾಲ ಮೌನಾಂದೋಲನವನ್ನು ಆಚರಿಸಿದರು.

“ಅಣ್ಣಾ ಹಝಾರೆ ಇಂದು ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ಪ್ರಾರಂಭಿಸಿ, ಮಧ್ಯಾಹ್ನ 1 ಗಂಟೆಗೆ ಅಂತ್ಯಗೊಳಿಸಿದರು” ಎಂದು ಅವರ ನಿಕಟವರ್ತಿ ದತ್ತ ಅವಾರಿ ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಹಿಲ್ಯಾನಗರದ ಮಹಾತ್ಮ ಗಾಂಧಿ ಪ್ರತಿಮೆಯೆದುರು ಪ್ರತಿಭಟನೆ ನಡೆಸಿದ ಅಣ್ಣಾ ಹಝಾರೆ, ಬಳಿಕ, ಅದೇ ಜಿಲ್ಲೆಯಲ್ಲಿರುವ ತಮ್ಮ ಸ್ವಗ್ರಾಮ ರಾಳೇಗಣ ಸಿದ್ಧಿಗೆ ತೆರಳಿದರು.

ಅಣ್ಣಾ ಹಜಾರೆ ಬುಧವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು, “ಪೊಲೀಸರ ಕ್ರಮ ಹಾಗೂ ಹಿಂಸಾಚಾರದಿಂದ ನನಗೆ ತುಂಬಾ ನೋವಾಗಿದೆ” ಎಂದು ಹೇಳಿದ್ದರು. “ಪ್ರತಿಭಟನಾಕಾರರ ಅಸಮಾಧಾನವನ್ನು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಾಗಿ ನೋಡಬಾರದು. ಬದಲಿಗೆ, ಸಮಾಜದ ಸಂಕಟ ಹಾಗೂ ನಿರೀಕ್ಷೆಗಳನ್ನಾಗಿ ಗಮನಿಸಬೇಕು” ಎಂದು ಅವರು ಕಿವಿಮಾತು ಹೇಳಿದ್ದರು.
ಅಲ್ಲದೆ, “ಒಂದು ವೇಳೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ತಕ್ಷಣ ಸರಕಾರವೇನೂ ಬಿದ್ದು ಹೋಗುವುದಿಲ್ಲ. ಬದಲಿಗೆ, ಅದು ಸರಕಾರದ ಕಾರ್ಯವೈಖರಿಯನ್ನು ಮತ್ತಷ್ಟು ಉತ್ತರದಾಯಿಯಾಗಿ ಮಾಡಿ ಪರಿಣಾಮಕಾರಿಯನ್ನಾಗಿಸಲಿದೆ. ಪ್ರತಿಭಟನಾಕಾರರ ಮಾತುಗಳನ್ನು ತಾಳ್ಮೆಯಿಂದ ಆಲಿಸಬೇಕು ಹಾಗೂ ನಂಬಿಕೆಯ ವಾತಾವರಣವನ್ನು ನಿರ್ಮಾಣ ಮಾಡಬೇಕು. ಸಕಾರಾತ್ಮಕ ಮಾತುಕತೆ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು” ಎಂದು ಅವರು ಸರಕಾರಕ್ಕೆ ಮನವಿ ಮಾಡಿದ್ದಾರೆ.