ಮಂಗಳೂರು ರೈಲ್ವೆ ವ್ಯಾಪ್ತಿಯನ್ನು ನೈರುತ್ಯ ರೈಲ್ವೆಗೆ ಸೇರಿಸುವ ಪ್ರಕ್ರಿಯೆಗೆ ಕೊನೆಗೂ ರೈಲ್ವೆ ಇಲಾಖೆಯು ಗ್ರೀನ್ ಸಿಗ್ನಲ್ ಕೊಟ್ಟಿದೆ. ಇದರಿಂದ ಕರಾವಳಿ ಕರ್ನಾಟಕದ ಜನರ ಬಹುದಶಕಗಳ ಪ್ರಮುಖ ಬೇಡಿಕೆ ನೆರವೇರುತ್ತಿದೆ.
ಹೌದು, ಇದುವರೆಗೂ ಕೇರಳದ ಪಾಲಕ್ಕಾಡ್ ವಿಭಾಗದಲ್ಲಿದ್ದ ಮಂಗಳೂರು ಪ್ರದೇಶವನ್ನು ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಅಧಿಕೃತವಾಗಿ ವರ್ಗಾಯಿಸಿ ರೈಲ್ವೆ ಮಂಡಳಿ ಮಹತ್ವದ ಆದೇಶ ಹೊರಡಿಸಿದೆ. ಈ ಐತಿಹಾಸಿಕ ಬದಲಾವಣೆಯು 2026ರ ಅಕ್ಟೋಬರ್ 1 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.
ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ಸೇರಿದಂತೆ ಉಳ್ಳಾಲ ರೈಲ್ವೆ ನಿಲ್ದಾಣದವರೆಗಿನ ಸಂಪೂರ್ಣ ಪ್ರದೇಶವನ್ನು ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಇದುವರೆಗೆ ಪಾಲಕ್ಕಾಡ್ ಮತ್ತು ಮೈಸೂರು ವಿಭಾಗದ ನಡುವಿನ ರೈಲ್ವೆ ಇಂಟರ್ಚೇಂಜ್ ಪಾಯಿಂಟ್ (ರೈಲ್ವೆ ಗಡಿ) ಆಗಿದ್ದ ಪಡೀಲ್ ಬದಲಿಗೆ, ಇನ್ನು ಮುಂದೆ ಉಳ್ಳಾಲ ಹೊಸ ಇಂಟರ್ಚೇಂಜ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸಲಿದೆ.
ಕರಾವಳಿ ಜನರಿಗೆ ಏನು ಲಾಭ?
ಮಂಗಳೂರು ರೈಲ್ವೆ ವ್ಯಾಪ್ತಿಯು ಕೇರಳದ ಪಾಲಕ್ಕಾಡ್ ವಿಭಾಗದಲ್ಲಿದ್ದ ಕಾರಣ ಕರ್ನಾಟಕದ ರಾಜಧಾನಿ ಬೆಂಗಳೂರು, ಮೈಸೂರು ಹಾಗೂ ಉತ್ತರ ಕರ್ನಾಟಕದ ಭಾಗಗಳಿಗೆ ಮಂಗಳೂರಿನಿಂದ ರೈಲು ಸಂಪರ್ಕ ಕಲ್ಪಿಸಲು ಹಲವು ಅಡೆತಡೆಗಳಿದ್ದವು. ಮಂಗಳೂರು ಈಗ ಸಂಪೂರ್ಣವಾಗಿ ಕರ್ನಾಟಕದ ನೈರುತ್ಯ ರೈಲ್ವೆ (ಹುಬ್ಬಳ್ಳಿ ವಲಯ/ಮೈಸೂರು ವಿಭಾಗ) ವ್ಯಾಪ್ತಿಗೆ ಬರುವುದರಿಂದ, ಕರಾವಳಿ-ಬೆಂಗಳೂರು ನಡುವೆ ಹೊಸ ರೈಲುಗಳ ಆರಂಭ, ವೇಳಾಪಟ್ಟಿ ಸುಧಾರಣೆ ಹಾಗೂ ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ನಿಲ್ದಾಣಗಳ ಸರ್ವಾಂಗೀಣ ಅಭಿವೃದ್ಧಿಗೆ ವೇಗ ಸಿಗಲಿದೆ.



