ಶನಿವಾರ, 24 ಅಕ್ಟೋಬರ್ 2026

ಪಾರ್ಶ್ವವಾಯು ಪೀಡಿತ ವೃದ್ಧನ ಕೈಗೆ 4 ಗಂಟೆಗಳ ಕಾಲ ಸುತ್ತಿಕೊಂಡಿದ್ದ ವಿಷ ಸರ್ಪ – ಮುಂದಾಗಿದ್ದು ಪವಾಡ!!

ಹಾವು ಎಂದರೆ ಯಾರಿಗೆ ಭಯವಿಲ್ಲ ಹೇಳಿ? ಎಂತವರು ಕೂಡ ಹಾವನ್ನು ಕಂಡರೆ ಬೆಚ್ಚಿ ಬೀಳುತ್ತಾರೆ. ಆದರೆ ಇಲ್ಲೊಂದು ಕಡೆ ವಿಷ ಸರ್ಪವೊಂದು 4 ಗಂಟೆಗಳ ಕಾಲ ಪಾರ್ಶ್ವವಾಯು ಪೀಡಿತ ವೃದ್ಧನ ಕೈಗೆ ಸುತ್ತಿಕೊಂಡಿರುವ ಅಘಾತಕಾರಿ ಘಟನೆ ನಡೆದಿದೆ.

ಹೌದು, ಈ ವಿಚಾರವನ್ನು ಕೇಳುಗರಿಗೆ ಒಮ್ಮೆ ಮೈ ಜುಮ್ ಎನ್ನಬಹುದು. ಯಾಕೆಂದರೆ ಒಡಿಶಾದ ಬೌಧ್ ಜಿಲ್ಲೆಯಲ್ಲಿ ಅಲುಗಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಪಾರ್ಶ್ವವಾಯು ಪೀಡಿತ ಕೃಷ್ಣ ಚಂದ್ರ ಸಾಹು, ಮಲಗಿದ್ದಾಗ ವಿಷ ಪೂರಿತ ಹಾವು ಕೋಣೆಯೊಳಗೆ ಸೇರಿಕೊಂಡಿದೆ. ದೇಹದ ಚಲನವಲನ ಕಳೆದುಕೊಂಡಿದ್ದ ಕೃಷ್ಣ ಚಂದ್ರ ಸಾಹು ಸರ್ಪದೊಂದಿಗೆ ಬರೋಬ್ಬರಿ 4 ಗಂಟೆ ಕಳೆದಿದ್ದಾರೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಕುಟುಂಬ ಸದಸ್ಯರ ಪ್ರಕಾರ, ಸಾಹು ಅವರ ಕೋಣೆಯ ಕಿಟಕಿಯನ್ನು ರಾತ್ರಿಯಿಡೀ ತೆರೆದಿಡಲಾಗಿತ್ತು. ತಡರಾತ್ರಿ ಹಾವು ಮನೆಗೆ ಪ್ರವೇಶಿಸಿ ಸಾಹು ಅವರ ಹಾಸಿಗೆಗೆ ಎಂಟ್ರಿ ನೀಡಿದೆ. ಹಾವು ತನ್ನ ದೇಹದ ಮೇಲೆ ಹರಿದಾಡುತ್ತಿರುವುದು ಸಾಹು ಅವರಿಗೆ ತಕ್ಷಣವೇ ತಿಳಿದಿದೆ. ಆದರೆ, ಪಾರ್ಶ್ವವಾಯು ಸಮಸ್ಯೆಯಿಂದಾಗಿ ಅವರಿಗೆ ತಕ್ಷಣವೇ ಎದ್ದು ಓಡಲು ಸಾಧ್ಯವಾಗಲಿಲ್ಲ.

 ಹಾವು ತನ್ನ ದೇಹದ ಮೇಲೆ ಹರಿದಾಡುತ್ತಿದೆ ಎಂಬುದನ್ನು ಅರಿತಾಗ ಕೃಷ್ಣ ಅವರಿಗೆ ಭಯಗೊಂಡು ಸ್ವಲ್ಪ ಚಲನೆ ಉಂಟಾಗಿದೆ. ಈ ಸಂದರ್ಭದಲ್ಲಿ ಹಾವು ಅವರ ಒಂದು ಕೈಗೆ ಸುತ್ತಿಕೊಂಡಿದ್ದು ದೇಹದ ಇನ್ನೊಂದು ಭಾಗವು ಹತ್ತಿರದ ಕುರ್ಚಿಯ ಸುತ್ತಲೂ ಸುತ್ತಿಕೊಂಡಿತು. ಹಾವಿನ ಆಕ್ರೋಶಕ್ಕೆ ಕಾರಣವಾಗಿ ಪ್ರಾಣಕ್ಕೇ ಕುತ್ತು ತರಬಹುದು ಎಂದು ಅರಿತ ಸಾಹು, ತೀವ್ರ ಆತಂಕದ ನಡುವೆಯೂ ಅಲುಗಾಡದೆ ಮಲಗಿದ್ದರು. ತಾಳ್ಮೆಯೇ ಅವರ ಪ್ರಾಣ ಉಳಿಸಿದೆ. ​

ಬೆಳಗಿನ ಜಾವ ಕೋಣೆಗೆ ಬಂದ ಕುಟುಂಬಸ್ಥರು ಈ ದೃಶ್ಯವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಆದರೆ ಯಾವುದೇ ಗಡಿಬಿಡಿ ಮಾಡದೆ ಹಾವನ್ನು ಕೆಣಕದೆ ಸೂಕ್ತ ಸಮಯಕ್ಕಾಗಿ ಕಾದು ನಿಂತರು. ಸುಮಾರು ನಾಲ್ಕು ಗಂಟೆಗಳ ನಿರಂತರ ಆತಂಕದ ನಂತರ, ಕುಟುಂಬಸ್ಥರು ಹಾವಿಗೆ ಯಾವುದೇ ಅಪಾಯವಾಗದಂತೆ ಸಾಹು ಅವರ ಕೈಯಿಂದ ಬೇರ್ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.