ಶನಿವಾರ, 24 ಅಕ್ಟೋಬರ್ 2026

11 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿ ಪೊಲೀಸ್‌ ಎನ್‌ಕೌಂಟರ್‌ಗೆ ಬಲಿ

11 ವರ್ಷದ ಬಾಲಕಿಯ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಎನ್‌ಕೌಂಟರ್‌ ಮಾಡಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಾರುಯಿಪುರದಲ್ಲಿ 11 ವರ್ಷದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಕೊಲೆ ನಡೆದಿದ್ದು, ಕೊಳವೊಂದರಲ್ಲಿ ಹುಡುಗಿಯ ಶವ ಚೀಲದಲ್ಲಿ ತುಂಬಿ ಪತ್ತೆಯಾಗಿತ್ತು.

ಭಾರೀ ಆಕ್ರೋಶ ಉಂಟು ಮಾಡಿದ್ದ ಈ ಘಟನೆಯ ಪ್ರಮುಖ ಆರೋಪಿಯ ಪ್ರವಾಶ್‌ ಮೊಂಡಲ್‌ನನ್ನು ತನಿಖೆಯ ಭಾಗವಾಗಿ ಸ್ಥಳ ಮಹಜರಿಗೆ ಕರೆದೊಯ್ದಾಗ, ಆತ ಪೊಲೀಸರಿಂದ ತಪ್ಪಿಸಲು ಯತ್ನ ಮಾಡಿದ್ದಾನೆ. ಈ ವೇಳೆ ಪೊಲೀಸರು ನಡೆಸಿದ ಗುಂಡಿನ ದಾಳಿಗೆ ಆರೋಪಿ ಬಲಿಯಾಗಿದ್ದಾನೆ.

ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿ ಸಂಘಟನೆಗಳು ಬೀದಿಗಿಳಿದು ಭಾರೀ ಪ್ರತಿಭಟನೆ ಮಾಡಿದ್ದವು. ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಆರೋಪಿಯ ಬಂಧನ ಮಾಡಿದ್ದರು. ಸಾಕ್ಷ್ಯ ಸಂಗ್ರಹಕ್ಕಾಗಿ ಪೊಲೀಸರ ತಂಡ ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆದೊಯ್ದಿತ್ತು. ಈ ಸಂದರ್ಭದಲ್ಲಿ ಆರೋಪಿ ಪೊಲೀಸರಿಗೆ ಹಲ್ಲೆ ಮಾಡಿ ಓಡಲು ಯತ್ನ ಮಾಡಿದಾಗ ಪೊಲೀಸರು ಹಾರಿಸಿದ ಗುಂಡು ಆತನಿಗೆ ತಗುಲಿದೆ. ಕೂಡಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.