8 ಕ್ಷೇತ್ರಗಳ ಗೆಲುವೇ ಗುರಿ: ಡಿಸಿಸಿ ನೂತನ ಅಧ್ಯಕ್ಷ ಪದ್ಮರಾಜ್
ಮಂಗಳೂರು: ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಗತ ವೈಭವ ಮರಳಿ ತರುವ ಜತೆಗೆ ಎಲ್ಲ 8 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವುದೇ ತಮ್ಮಪ್ರಮುಖ ಗುರಿ ಎಂದು ಡಿಸಿಸಿಯ ನೂತನ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.
Sponsoredಗುರುವಾರ ಜಿಲ್ಲಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪಕ್ಷ ಕೊಟ್ಟ ಹೊಣೆಯನ್ನು ಸಮರ್ಥವಾಗಿ ನಿಭಾಯಿಸುವೆ. ಚುನಾವಣೆಯಲ್ಲಿ ಸ್ಪರ್ಧಿಸುವ ಗುರಿ ಇಲ್ಲ. ಮುಂಬರುವ ವಿಧಾನಸಭೆ, ಲೋಕಸಭೆ ಚುನಾವಣೆಗಳನ್ನು ಗೆಲ್ಲುವ ಜತೆಗೆ 2029 ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಆಗುವವರೆಗೂ ಜಿಲ್ಲಾ ಸಮಿತಿ ವಿರಮಿಸದು. ಎಲ್ಲ ಸ್ಥಳೀಯ ಸಂಸ್ಥೆಗಳನ್ನು ಮತ್ತೆ ಪಕ್ಷದ ತೆಕ್ಕೆಗೆ ಪಡೆಯುತ್ತೇವೆ ಎಂದರು.
ಹಿರಿಯರಾದ ಜನಾರ್ದನ ಪೂಜಾರಿ, ನಾಯಕ ರಮಾನಾಥ ರೈ ಅವರನ್ನು ಭೇಟಿಯಾಗಿ ಭೇಟಿಯಾಗಿ ಆಶೀರ್ವಾದ ಪಡೆದಿದ್ದೇನೆ. ನಮ್ಮ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಯನ್ನು ಬಲಪಡಿಸಲಾಗುವುದು. ಪಕ್ಷದಲ್ಲಿ ಶಿಸ್ತಿಗೆ ಆದ್ಯತೆ ನೀಡಲಾಗುವುದು. ಚುನಾವಣೆ ಸಂದರ್ಭ ಪ್ರಚಾರದ ಬಗ್ಗೆ ಕಾರ್ಯಕರ್ತರಿಗೆ ತರಬೇತಿ ನೀಡುವುದಾಗಿ ಅವರು ಹೇಳಿದರು.
ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅಪ್ಪಿ, ಮುಖಂಡರಾದ ಶುಭೋದಯ ಆಳ್ವ, ಲಾರೆನ್ಸ್ ಡಿ’ಸೋಜಾ, ಸಲೀಂ ಅಹಮ್ಮದ್ ಮತ್ತಿತರರಿದ್ದರು.




