ಪುತ್ತೂರು ಚಲೋದಲ್ಲಿ ಪಾಕಿಸ್ತಾನ ಬಾಂಗ್ಲಾದೇಶಕ್ಕೆ ಹೋಲಿಸಿ ಘೋಷಣೆ-ಕೇಸು ದಾಖಲು
ಪುತ್ತೂರು: ಆ.31 ರಂದು ನಗರದಲ್ಲಿ ನಡೆದ ಪುತ್ತೂರು ಚಲೋ ಮೆರವಣಿಗೆಯಲ್ಲಿ ಸಮುದಾಯವೊಂದನ್ನು ಗುರಿ ಮಾಡಿ ಪ್ರಚೋದನಕಾರಿ ಘೋಷಣೆ ಕೂಗಿದ ಆರೋಪದಲ್ಲಿ ಹಲವರ ವಿರುದ್ಧ ಪುತ್ತೂರು ನಗರ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಯೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
Sponsoredದರ್ಬೆಯಿಂದ ವೆಂಕಟರಮಣ ದೇವಸ್ಥಾನದವರೆಗೆ ಚಲೋ ನಡೆದಿತ್ತು. ಈ ಮೆರವಣಿಗೆಯಲ್ಲಿ ಸ್ಥಳೀಯ ಮುಸ್ಲಿಂ ಸಮುದಾಯವನ್ನು ಪಾಕಿಸ್ತಾನ ಹಾಗೂ ಬಾಂಗ್ಲಾದೇಶಕ್ಕೆ ಹೋಲಿಕೆ ಮಾಡಿ ಘೋಷಣೆ ಕೂಗಲಾಗಿದೆ ಎಂದು ದೂರಿನಲ್ಲಿ ಆರೋಪ ಮಾಡಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಘೋಷಣೆಗಳ ಕುರಿತು ವೀಕ್ಷಿಸಿದ ನಂತರ ದೂರುದಾರರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ನಂತರ ಪೊಲೀಸರು ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಅನುಮತಿ ಪಡೆದು ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಕಂಜ ಗ್ರಾಮದ ಬನದಬೈಲು ನಿವಾಸಿ ನಾಗೇಶ್ ಶ್ರೀನಿವಾಸ ಗೌಡ ಹಾಗೂ ಇತರರು ಭಾಗಿಯಾಗಿರುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಈ ಕುರಿತು ನಾಗೇಶ್ ಶ್ರೀನಿವಾಸ ಗೌಡ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




