ಉಪ್ಪಿನಂಗಡಿ: ಕಾರು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ಆರೋಪ- ಕೇಸು ದಾಖಲು
ಉಪ್ಪಿನಂಗಡಿ: ಕಾರನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ ಆರೋಪದ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Sponsoredಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ನಿವಾಸಿ, ಪ್ರಸ್ತುತ ನೆಕ್ಕಿಲಾಡಿಯಲ್ಲಿ ವಾಸವಿರುವ ರೋಲ್ಸನ್ ನೀಲ್ ಲುವಿನ್ (29) ನೀಡಿದ ದೂರಿನ ಪ್ರಕಾರ ಅ.21 ರಂದು ಮಧ್ಯಾಹ್ನ 1.30 ರ ಸುಮಾರಿಗೆ ಘಟನೆ ನಡೆದಿದೆ.
ಡಾ.ಸುಪ್ರೀತ್ ಲೋಬೋ ಅವರನ್ನು ದೂರುದಾರರು ತಮ್ಮ ಕಾರಿನಲ್ಲಿ ಉಪ್ಪಿನಂಗಡಿಯ ನರ್ಸಿಂಗ್ ಹೋಂ ನಿಂದ ಕರೆದುಕೊಂಡು ಹೋಗುತ್ತಿದ್ದಾಗ, ರಾ.ಹೆ.75 ರಲ್ಲಿ ಹಿಂದಿನಿಂದ ಬಂದ ಮತ್ತೊಂದು ಕಾರಿನ ಚಾಲಕ ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಾ ಹಾರ್ನ್ ಮಾಡಿದ್ದನೆ ಎನ್ನಲಾಗಿದೆ. ಈ ವೇಳೆ ನಿಧಾನವಾಗಿ ವಾಹನ ಚಲಾಯಿಸು ದೂರುದಾರರು ಕೈ ಸನ್ನೆ ಮಾಡಿದ್ದಾರೆ.
ಇದರಿಂದ ಆಕ್ರೋಶಗೊಂಡ ಆರೋಪಿ ತನ್ನ ಕಾರನ್ನು ಅಡ್ಡಗಟ್ಟಿ, ದೂರುದಾರರ ಕಾಲರ್ ಹಿಡಿದು ಮುಖಕ್ಕೆ ಮುಷ್ಠಿಯಿಂದ ಹೊಡೆದು, ಕಾಲಿನಿಂದ ತುಳಿದಿರುವುದಾಗಿ ದೂರಿನಲ್ಲಿ ಆರೋಪ ಮಾಡಲಾಗಿದೆ. ಈ ಸಂದರ್ಭದಲ್ಲಿ ರಾಜೇಶ್ ಮತ್ತು ಸಂದೀಪ್ ಎನ್ನುವವರು ಸ್ಥಳಕ್ಕೆ ಬಂದು ಜಗಳ ಬಿಡಿಸಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




