ಸೋಮವಾರ, 26 ಅಕ್ಟೋಬರ್ 2026
Trending

‘ವಿದೇಶಿ ಏಜೆಂಟ್’ ಹಣೆಪಟ್ಟಿ ಮೊದಲು ನಿಲ್ಲಿಸಿ: ಮೋದಿ ಮೇಲೆ ಅಣ್ಣಾಮಲೈ ಟ್ವೀಟ್ ಬಾಂಬ್!

Annamalai

ಚೆನ್ನೈ: ಅಧಿಕಾರದ ಕುರ್ಚಿಯ ಮೇಲೆ ಕೂತು 12 ವರ್ಷಗಳೇ ಕಳೆದಿವೆ. ಆದರೂ ತನ್ನ ಅಸ್ತಿತ್ವದ ನೆರಳು ಕಳೆದು ಹೋಗಬಾರದು ಎಂಬ ಕಾರಣಕ್ಕೆ ಇವತ್ತಿಗೂ ಒಂದು ಕೃತಕ ಶತ್ರುವನ್ನು ಹುಡುಕುತ್ತಾ ಕೂತಿದೆಯೇ ಕೇಂದ್ರ ಸರ್ಕಾರ? ಹೀಗೊಂದು ನೇರ ಮತ್ತು ತೀಕ್ಷ್ಣವಾದ ಪ್ರಶ್ನೆಯನ್ನು ಎಸೆದಿದ್ದಾರೆ ತಮಿಳುನಾಡು ಬಿಜೆಪಿಯ ಮಾಜಿ ಸಾರಥಿ ಕೆ. ಅಣ್ಣಾಮಲೈ!

Sponsored

ದೆಹಲಿಯಲ್ಲಿ ಪ್ರತಿಭಟನೆಗೆ ಕೂತಿದ್ದ ‘ಕಾಕ್ರೋಚ್ ಜನತಾ ಪಕ್ಷ’ ನಾಯಕರನ್ನು ಹತ್ತಿಕ್ಕಿದ ಗೃಹ ಇಲಾಖೆಯ ನಡೆಯನ್ನು ಅಣ್ಣಾಮಲೈ ತೀವ್ರವಾಗಿ ಖಂಡಿಸಿದ್ದಾರೆ. ಪ್ರಶ್ನೆ ಕೇಳಿದವರನ್ನು ಜೈಲಿಗಟ್ಟುವುದು, ಜಾಮೀನು ನಿರಾಕರಿಸುವುದು ಮತ್ತು ಕೊನೆಗೆ ಅವರ ಮೇಲೊಂದು ‘ದೇಶದ್ರೋಹಿ’ ಅಥವಾ ‘ವಿದೇಶಿ ಏಜೆಂಟ್’ ಎಂಬ ಹಣೆಪಟ್ಟಿಯನ್ನು ಸುಲಭವಾಗಿ ಅಂಟಿಸಿಬಿಡುವ ಇಂದಿನ ರಾಜಕೀಯ ಟ್ರೆಂಡ್‌ಗೆ ಅಣ್ಣಾಮಲೈ ಬ್ರೇಕ್ ಹಾಕಲು ಯತ್ನಿಸಿದ್ದಾರೆ.

ಅಷ್ಟೇ ಅಲ್ಲ, 2011ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದ ದೌರ್ಜನ್ಯದ ವಿರುದ್ಧ ಸಿಡಿದೆದ್ದಿದ್ದ ಗುಜರಾತ್ ಸಿಎಂ ನರೇಂದ್ರ ಮೋದಿಯವರದ್ದೇ ಹಳೆ ಹೇಳಿಕೆಯನ್ನು ನೆನಪಿಸಿ, ಅಂದು ಮೋದಿ ಹೇಳಿದ್ದು ಸರಿಯಾಗಿತ್ತು, ಆದರೆ ಇಂದು ನಿಮ್ಮದೇ ಆಡಳಿತದಲ್ಲಿ ಪ್ರಜಾಪ್ರಭುತ್ವದ ಧ್ವನಿ ಅಡಗುತ್ತಿರುವುದೇಕೆ ಎಂದು ಅವರು ಪರೋಕ್ಷವಾಗಿ ಪ್ರಶ್ನಿಸಿದ್ದಾರೆ. 12 ವರ್ಷ ಅಧಿಕಾರ ನಡೆಸಿದ ಸರ್ಕಾರ ಟೀಕೆಗಳಿಗೆ ವಸ್ತುನಿಷ್ಠವಾಗಿ ಉತ್ತರಿಸಬೇಕೇ ಹೊರತು ವಿರೋಧಿಗಳನ್ನು ಶತ್ರುಗಳಂತೆ ನೋಡಬಾರದು ಎನ್ನುವುದು ಮಾಜಿ ಐಪಿಎಸ್ ಅಧಿಕಾರಿಯ ಖಡಕ್ ವಾದ.
2011ರಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಚಳವಳಿಯ ಮೇಲೆ ಅಂದಿನ ಕಾಂಗ್ರೇಸ್ ಸರ್ಕಾರ ಪೊಲೀಸ್ ದೌರ್ಜನ್ಯ ಎಸಗಿದಾಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಯವರು ‘ನನ್ನ ಕೈಗಳನ್ನು ಕಟ್ಟಿಹಾಕಿರದಿದ್ದರೆ, ನಾನೇ ದೆಹಲಿಗೆ ತೆರಳಿ ಕೇಂದ್ರ ಸರ್ಕಾರದ ವಿರುದ್ಧ ಯುದ್ಧ ಸಾರುತ್ತಿದ್ದೆ’ ಎಂದಿದ್ದರು. ಅಂದು ಮೋದಿ ಹೇಳಿದ್ದು ನೂರಕ್ಕೆ ನೂರು ಸರಿಯಾಗಿತ್ತು.