ಸೋಮವಾರ, 26 ಅಕ್ಟೋಬರ್ 2026
Trending

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪಂಚಾಮೃತ ಮಹಾಭೀಷೇಕ ದರ ಏರಿಕೆ

Kukke Subramanya

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎರಡು ಸೇವೆಗಳ ದರ ಪರಿಷ್ಕರಣೆ ಮಾಡಲಾಗಿದ್ದು, ಪಂಚಾಮೃತ ಮಹಾಭಿಷೇಕ ಸೇವೆಯ ದರವನ್ನು ರೂ.11,000 ಕ್ಕೆ ಹೆಚ್ಚಳ ಮಾಡಲಾಗಿದೆ. ಹೊಸದಾಗಿ ರಥೋತ್ಸವ ಸೇವೆಯನ್ನು ಆರಂಭಿಸಲಾಗಿದ್ದು, ಈ ಸೇವೆಗೆ ರೂ.12,000 ದರ ನಿಗದಿಪಡಿಸಲಾಗಿದೆ.

Sponsored

ಪಂಚಾಮೃತ ಮಹಾಭಿಷೇಕ ಸೇವೆ ಈ ಹಿಂದೆ ರೂ.6000 ದರ ನಿಗದಿಯಾಗಿತ್ತು. ಇದೀಗ ಅದನ್ನು ಪರಿಷ್ಕರಿಸಿ ರೂ.11,000ಕ್ಕೆ ಏರಿಕೆ ಮಾಡಲಾಗಿದೆ.

ಬೆಳ್ಳಿ ರಥೋತ್ಸವ ಸೇವೆಯನ್ನು ಕಾರ್ತಿಕ ಮಾಸದ ಶುದ್ಧ ಷಷ್ಠಿಯಿಂದ ಜ್ಯೇಷ್ಠ ಮಾಸದ ಶುದ್ಧ ಷಷ್ಠಿಯವರೆಗೆ ಪ್ರತಿ ತಿಂಗಳ ನಿರ್ದಿಷ್ಟ ದಿನಗಳಲ್ಲಿ ಹರಕೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಪ್ರತಿ ತಿಂಗಳ ಶುದ್ದ ಬಿದಿಗೆ, ಬಹುಳ ಬಿದಿಗೆ, ಶುದ್ದ ಚೌತಿ, ಬಹುಳ ಚೌತಿ, ಶುದ್ದ ಷಷ್ಠಿ, ಬಹುಳ ಷಷ್ಠಿ, ಶುದ್ದ ನವಮಿ, ಬಹುಳ ನವಮಿ, ಶುದ್ದ ಚತುರ್ದಶಿ ಹಾಗೂ ಬಹುಳ ಚತುರ್ದಶಿ ಸೇರಿದಂತೆ ಒಟ್ಟು 10 ದಿನಗಳಲ್ಲಿ ಬೆಳ್ಳಿ ರಥೋತ್ಸವ ಸೇವೆ ಸಲ್ಲಿಸಬಹುದು.

ಬೆಳ್ಳಿ ರಥೋತ್ಸವ ಸೇವೆ ನಡೆಯುವ ದಿನ ಭಂಡಿ ರಥೋತ್ಸವ ಸೇವೆ ನಡೆಯುವುದಿಲ್ಲ. ಅದೇ ರೀತಿ ಬೀದಿ ಉತ್ಸವ ನಡೆಯುವ ದಿನ ಬೆಳ್ಳಿ ರಥೋತ್ಸವ ನಡೆಯುವುದಿಲ್ಲ ಎಂದು ದೇವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.