ಶನಿವಾರ, 24 ಅಕ್ಟೋಬರ್ 2026

ಶಿವಮೊಗ್ಗ: ಬಸ್‌ನಿಲ್ದಾಣದಲ್ಲಿ ಪತ್ತೆಯಾದ ಶಿಶು ಪ್ರಕರಣ; ಮತ್ತೆ ತಾಯಿ ಮಡಿಲಿಗೆ

ಶಿವಮೊಗ್ಗ: ಹೊಸನಗರ ತಾಲೂಕಿನ ಗವಟೂರು ಬಸ್‌ ನಿಲ್ದಾಣದಲ್ಲಿ ಜು.5 ರಂದು ರಾತ್ರಿ ಅನಾಥವಾಗಿ ಪತ್ತೆಯಾಗಿದ್ದ ಶಿಶುವಿನ ತಾಯಿಯನ್ನು ಪತ್ತೆ ಹಚ್ಚಲಾಗಿದೆ.

ನವಜಾತ ಹೆಣ್ಣು ಶಿಶುವಿನ ತಾಯಿಯನ್ನು ರಿಪ್ಪನ್‌ ಪೇಟೆ ಠಾಣೆ ಪೊಲೀಸರು ಪತ್ತೆ ಮಾಡಿದ್ದಾರೆ.

ಸಾಗರದ 21 ವರ್ಷದ ಯುವತಿ ಶಿಶುವನ್ನು ಬಿಟ್ಟು ಹೋಗಿರುವುದು ವರದಿಯಾಗಿದೆ. ವರ್ಷದಿಂದ ಯುವಕನೊಬ್ಬನ ಪ್ರೀತಿಸುತ್ತಿದ್ದ ಯುವತಿ ದೈಹಿಕ ಸಂಬಂಧ ಬೆಳೆಸಿ ಗರ್ಭಿಣಿಯಾಗಿದ್ದು, ಮನೆಯವರಿಗೆ ತಿಳಿಯದೆ ಗೌಪ್ಯವಾಗಿ ಮಗುವಿಗೆ ಜನ್ಮ ನೀಡಿದ್ದಳು. ಮದುವೆಯಾಗದೆ ಮಗು ಪಡೆದಿದ್ದು ಸಮಾಜಕ್ಕೆ ಹೆದರಿ ಯುವತಿ ಬೈಕ್‌ನಲ್ಲಿ ಬಂದು ಮಗುವನ್ನು ಬಿಟ್ಟು ಹೋಗಿದ್ದರು.

ಜು.5 ರಂದು ರಾತ್ರಿ 7.30 ಕ್ಕೆ ಕೈ ಚೀಲದಲ್ಲಿ ನವಜಾತ ಶಿಶು ಮತ್ತು ಹಾಲಿನ ಬಾಟಲಿ ಇಟ್ಟು ತೆರಳಿದ್ದರು. ಭಾನುವಾರ ರಾತ್ರಿ ಮಗುವನ್ನ ರಕ್ಷಣೆ ಮಾಡಿದ ಪೊಲೀಸರು ಮೊಬೈಲ್‌ ಟವರ್‌ ಡಂಪ್‌ ನಂತಹ ತಾಂತ್ರಿಕ ಮಾಹಿತಿ ಆಧರಿಸಿ ಮಗುವಿನ ತಾಯಿಯನ್ನು ಪತ್ತೆ ಮಾಡಿ ಶಿಶುವನ್ನು ತಾಯಿ ಮಡಿಲಿಗೆ ಸೇರಿಸಿದ್ದಾರೆ.