ಸಾರಿಗೆ ಸಚಿವ ಬೈರತಿ ಸುರೇಶ್ ಶನಿವಾರ ರಾತ್ರಿ ಮಾಸ್ಕ್ ಧರಿಸಿ ದಿಢೀರ್ ಸಿಟಿ ರೌಂಡ್ಸ್ ಕೈಗೊಂಡು ಪ್ರಯಾಣಿಕನ ಸೋಗಿನಲ್ಲಿ BMTC ಬಸ್ ಗಳ ವ್ಯವಸ್ಥೆ ಕುರಿತಂತೆ ಪರಿಶೀಲನೆ ನಡೆಸಿದರು. ಈ ವೇಳೆ ಚಿಲ್ಲರೆ ಇಲ್ಲದ ಕಾರಣಕ್ಕೆ ನಿರ್ವಾಹಕ ಬಸ್ ನಿಂದ ಇಳಿಸಿದ ಘಟನೆ ಬಗ್ಗೆ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿ ಸಚಿವರಿಗೆ ಪಾಠ ಮಾಡಿದ್ದಾರೆ. ಈ ವೇಳೆ ಇದು ಚಿಲ್ಲರೆ ಕಾಸಿನ ಕಾಲವಲ್ಲ. ಇಂದು ಎಲ್ಲಾ ಕಡೆ QR ಕೋಡ್ ಮೂಲಕ ಹಣ ಪಾವತಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು “ಸಚಿವರ ಸಿಟಿ ರೌಂಡ್ಸ್ ಕುರಿತಂತೆ ಮಾಹಿತಿ ಸಿಕ್ಕ ತಕ್ಷಣ ನಾನು ಸಚಿವ ಬೈರತಿ ಸುರೇಶ್ ಜೊತೆ ಮಾತನಾಡಿಸಲು ಸಾಕಷ್ಟು ಬಾರಿ ಫೋನ್ ಮಾಡಿದೆ. ಆದರೆ ಅವರ ಜೊತೆ ಮಾತನಾಡುವ ಅವಕಾಶ ಸಿಗಲಿಲ್ಲ. ಹಿಂದಿನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಜೊತೆ ಮಾತನಾಡುವ ಅವಕಾಶ ದೊರಕಿತ್ತು ಎಂದು ತಿಳಿಸಿದ್ದಾರೆ. ಸಚಿವರು ಈ ರೀತಿ ಮುಖಕ್ಕೆ ಮಾಸ್ಕ್ ಧರಿಸಿ ಮಾರುವೇಷದಲ್ಲಿ ಹೋಗಿ ತನ್ನ ಇಲಾಖೆಯ ಕಾರ್ಯವೈಖರಿಯ ಪರಿಶೀಲನೆ ಮಾಡಿರುವುದು ನಿಜಕ್ಕೂ ಸ್ತುತ್ಯಾರ್ಹ.”
“ಸಚಿವರು 100 ರೂಪಾಯಿ ನೋಟನ್ನು ತನ್ನ ಟಿಕೆಟ್ ಗೆಂದು ಕೊಟ್ಟಾಗ, ಕಂಡಕ್ಟರ್ ಚಿಲ್ಲರೆ ಕೊಡಿ ಎಂದು ಕೇಳಿರುವುದು ಸಹಜವೇ. ಆದರೆ ಇದು ಚಿಲ್ಲರೆ ಕೊಟ್ಟು ಸಹಕರಿಸಿ ಎಂಬ ಕಾಲವಲ್ಲ. ಇಂದು ಎಲ್ಲಾ ಕಡೆ QR ಕೋಡ್ ಮೂಲಕ ಹಣ ಪಾವತಿ ಮಾಡಲು ವ್ಯವಸ್ಥೆ ಇರುವಾಗ ಬಿಎಂಟಿಸಿ ಬಸ್ ಗಳಲ್ಲೂ ಕಂಡಕ್ಟರ್ ಬಳಿ ಇರುವ ಟಿಕೆಟ್ ಕೊಡುವ ಮೆಷಿನ್ ನಲ್ಲಿಯೇ ಈ ವ್ಯವಸ್ಥೆ ಇರುತ್ತದೆ ಎಂಬುದು ನನಗಿರುವ ಮಾಹಿತಿ. ಹಾಗಿದ್ದ ಮೇಲೆ ಮಂತ್ರಿಗಳಿಗೆ ಈ ರೀತಿಯ ಅನುಭವ ಹೇಗೆ ಆಯಿತು?” ಎಂದು ಪ್ರಶ್ನಿಸಿದ್ದಾರೆ.
ಆದರೆ ರಾಜ್ಯದ ಸರಳ ಹಾಗೂ ಸಜ್ಜನಿಕೆಯ ರಾಜಕಾರಣಿ, ಶಾಸಕರಾಗಿರುವ ಸುರೇಶ್ ಕುಮಾರ್ ಅವರು ಈ ವಿಚಾರದಲ್ಲಿ ಯಾಕೋ ಅಲ್ಪಜ್ಞಾನಿಗಳಾಗಿದ್ದಾರೆ ಅನಿಸುತ್ತದೆ. ಸಾರಿಗೆ ಸಚಿವರು ಕೇವಲ ಚಿಲ್ಲರೆಯ ವಿಚಾರಕ್ಕೆ ಮಾತ್ರ ನೌಕರರನ್ನು ಅಮಾನತು ಮಾಡಲಿಲ್ಲ. ಅವರು ಪ್ರಯಾಣಿಕರೊಂದಿಗೆ ನಿರ್ಲಕ್ಷದಿಂದ ನಡೆದುಕೊಳ್ಳುವುದು, ಬೇಜವಾಬ್ದಾರಿತನ ತೋರಿಸುವುದು, ಬಸ್ ನಿಲ್ದಾಣ ಬಿಟ್ಟು ಮುಂದೆ ಹೋಗಿ ಬಸ್ ನಿಲ್ಲಿಸುವುದು, ಚಿಲ್ಲರೆ ಇಲ್ಲ ಎಂದ ತಕ್ಷಣ ಅವರ ಮೇಲೆ ರೇಗಾಡುವುದು ಸೇರಿದಂತೆ ಅನೇಕ ರೀತಿಯ ದುರ್ವರ್ತನೆಗಳನ್ನು ತೋರುತ್ತಿದ್ದರು. ಇವೆಲ್ಲವುಗಳನ್ನು ಅವರು ಬಸ್ನಲ್ಲಿ ಪ್ರಯಾಣಿಸುವಾಗ ಪ್ರತ್ಯಕ್ಷವಾಗಿ ಕಂಡು ಅಮಾನತ್ತಿನ ನಿರ್ಧಾರಕ್ಕೆ ಬಂದಿದ್ದಾರೆ. ಕೇವಲ ಚಿಲ್ಲರ ವಿಚಾರಕ್ಕೆ ಅಮಾನತು ಮಾಡಿದರೆ ನೀವು ಮಾತ್ರವಲ್ಲ ಇಡೀ ರಾಜ್ಯವೇ ಆ ಸಾರಿಗೆ ಸಚಿವರನ್ನು ಅಣಕಿಸುತ್ತಿತ್ತು. ಜೊತೆಗೆ ನಿಮ್ಮಂತೆಯೇ ನೀತಿ ಪಾಠ ಮಾಡುತ್ತಿತ್ತು. ಇದು ನಿಮಗೆ ತಿಳಿದಿದ್ದರೆ ಸಾರಿಗೆ ಸಚಿವರಿಗೆ ನೀತಿ ಪಾಠ ಮಾಡುತ್ತಿರಲಿಲ್ಲವೇನೋ!!



