ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಂಗಳವಾರದಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಆರಂಭವಾಗಲಿದ್ದು, ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಹೀಗಾಗಿ ಮನೆಯಲ್ಲಿ ತಾವೆಲ್ಲರೂ ಈ ದಾಖಲೆಗಳನ್ನು ಈ ಕೂಡಲೇ ತೆಗೆದಿಡಿ.
ಜೂನ್ 30ರಿಂದ ಜುಲೈ 29ರವರೆಗೆ ಚುನಾವಣಾಧಿಕಾರಿಗಳು ಹಾಗೂ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸಲಿದ್ದಾರೆ. ಈ ವೇಳೆ ಬಿಎಲ್ಒಗಳು ಎಸ್ಐಆರ್ ಅರ್ಜಿಯನ್ನು ನೀಡಲಿದ್ದು, ಮತದಾರರು ಅರ್ಜಿಯನ್ನು ಭರ್ತಿ ಮಾಡಿ ಸಹಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕಾಗಿದೆ. ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ಪರಿಶೀಲನೆ, ತಿದ್ದುಪಡಿ, ಹೊಸ ಮತದಾರರ ಹೆಸರು ಸೇರ್ಪಡೆ, ಮೃತಪಟ್ಟವರು ಹಾಗೂ ಸ್ಥಳಾಂತರಗೊಂಡವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆಯೂ ಇದೇ ಅವಧಿಯಲ್ಲಿ ನಡೆಯಲಿದೆ
ಮನೆಗೆ ಭೇಟಿ ನೀಡುವ ಅಧಿಕಾರಿಗಳು ನಿಗದಿತ ನಮೂನೆಗಳನ್ನು ನೀಡಿ ಭರ್ತಿ ಮಾಡಿಸಿಕೊಂಡು ವಾಪಸ್ ಪಡೆದುಕೊಳ್ಳುತ್ತಾರೆ. ಹೊಸ ಹೆಸರುಗಳ ಸೇರ್ಪಡೆ ಮಾಡಿ, ನಿಧನರಾದವರು, ಮನೆ ಖಾಲಿ ಮಾಡಿದವರ ಹೆಸರನ್ನು ಮತಪಟ್ಟಿಯಿಂದ ಕೈಬಿಟ್ಟು ಪರಿಷ್ಕರಣೆ ಮಾಡಲಾಗುತ್ತದೆ. ಎರಡೆರೆಡು ಕಡೆ ಹೆಸರು ಇದ್ದಲ್ಲಿ ಒಂದು ಕಡೆ ಮಾತ್ರ ಉಳಿಸುವ ಪ್ರಕ್ರಿಯೆ ನಡೆಯುತ್ತದೆ. ಗುರುತಿನ ಚೀಟಿಯಲ್ಲಿ ಏನಾದರೂ ದೋಷಗಳು ಇದ್ದಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಲು ಕೂಡ ಅವಕಾಶವಿದೆ.
ಅಗತ್ಯ ದಾಖಲೆಗಳು:
-ಕುಟುಂಬದ ಸದಸ್ಯರ ಗುರುತಿನ ಚೀಟಿ
-ಮತದಾರರ ಗುರುತಿನ ಚೀಟಿ (ವೋಟರ್ ಐಡಿ)
-ಆಧಾರ್ ಕಾರ್ಡ್
-ವಿಳಾಸ ದೃಢೀಕರಣ ದಾಖಲೆ
-ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
ಮತದಾರರು ಬಿಎಲ್ಒಗಳು ಮನೆಗೆ ಭೇಟಿ ನೀಡುವ ವೇಳೆ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡು ಅರ್ಜಿಯನ್ನು ಪೂರ್ಣಗೊಳಿಸಿದರೆ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸರಿಯಾಗಿ ದಾಖಲಾಗಿ ಮತದಾನದ ಹಕ್ಕು ಮುಂದುವರಿಯಲಿದೆ.
ವಿವರ ವ್ಯತ್ಯಾಸವಿದ್ದರೆ ನೋಟಿಸ್:
2025ರ ಮತ್ತು 2002ರ ಮತದಾರರ ಪಟ್ಟಿ ಎರಡರಲ್ಲೂ ಮತದಾರರ ಹೆಸರು ಇದ್ದು, ವಿವರಗಳಲ್ಲಿ ವ್ಯತ್ಯಾಸವಿದ್ದರೆ ನೋಟಿಸ್ ನೀಡಲಾಗುತ್ತದೆ. 2025ರ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು, 2002ರ ಮತದಾರರ ಪಟ್ಟಿಯಲ್ಲಿ ಮತದಾರರ ಅಥವಾ ಅವರ ಪೋಷಕರ ವಿವರ ಇಲ್ಲದೇ ಇದ್ದರೂ ನೋಟಿಸ್ ನೀಡಲಾಗುತ್ತದೆ. ನೋಟಿಸ್ ನೀಡಿದಾಕ್ಷಣ ಮತದಾರರ ಪಟ್ಟಿಯಿಂದ ಅಂಥವರ ಹೆಸರನ್ನು ಕೈಬಿಡಲಾಗುತ್ತದೆ ಎಂದರ್ಥವಲ್ಲ. ನೋಟಿಸ್ ಪಡೆದುಕೊಂಡವರು ಅಗತ್ಯ ದಾಖಲೆಗಳನ್ನು ಒದಗಿಸಿದರೆ, ಆ ಪೈಕಿ ಅರ್ಹರನ್ನು ಕರಡು ಮತದಾರರ ಪಟ್ಟಿಗೇ ಸೇರಿಸಲಾಗುತ್ತದೆ.




