ಶನಿವಾರ, 24 ಅಕ್ಟೋಬರ್ 2026

ಪುಣೆ ಮರ್ಡರ್‌ ಕೇಸ್‌ನಲ್ಲಿ ಬಿಗ್‌ ಟ್ವಿಸ್ಟ್‌, ಕೇತನ್‌ ಅಗರ್‌ವಾಲ್‌ರನ್ನು ತಳ್ಳಿದ್ದು ಸಿಯಾ ಗೋಯಲ್‌ ಅಲ್ಲ!

ಪುಣೆ: ಕೇತನ್‌ ಅಗರ್‌ವಾಲ್‌ ಕೊಲೆ ಪ್ರಕರಣದಲ್ಲಿ ಹೊಸ ಟ್ವಿಸ್ಟ್‌ವೊಂದು ದೊರಕಿದ್ದು, ಪುಣೆ ಬಳಿಯ ಲೋಹಗಡ್‌ ಕೋಟೆಯಲ್ಲಿ ನಡೆದ ಅಪರಾಧದ ದೃಶ್ಯವನ್ನು ಪೊಲೀಸರು ಮರುಸೃಷ್ಟಿ ಮಾಡಿದ ನಂತರ ಕೇತನ್‌ ಅಗರ್‌ವಾಲ್‌ ಕೊಲೆ ಪ್ರಕರಣದಲ್ಲಿ ಆಘಾತಕಾರಿ ವಿಷಯ ಹೊರಗೆ ಬಂದಿದೆ.

ಕೇತನ್‌ ಅಗರ್‌ವಾಲ್‌ ನನ್ನು ವಧು ಸಿಯಾ ಗೋಯಲ್‌ ಕೋಟೆಯಿಂದ ತಳ್ಳಿ ಕೊಲೆ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ತನಿಖೆಯ ನಂತರ ತಳ್ಳಿದ್ದು ಸಿಯಾ ಅಲ್ಲ ಎನ್ನುವ ವಿಷಯ ಬೆಳಕಿಗೆ ಬಂದಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಕೇತನ್‌ ತೂಕಕ್ಕೆ ಫೈಬರ್‌ ನಿರ್ಮಿತ ಡಮ್ಮಿಯನ್ನು ಬಳಸಿ ಘಟನೆಯನ್ನು ಮರುಸೃಷ್ಟಿ ಮಾಡಲಾಯಿತು. ಕೇತನ್‌ ಸಾವಿಗೆ ಕಾರಣವಾದ ಆಪಾದಿತ ಪಿತೂರಿ ಮತ್ತು ಘಟನೆಗಳನ್ನು ಸಿಯಾ ವಿವರಿಸಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಚಾರಣೆ, ಘಟನೆ ಮರುಸೃಷ್ಟಿ ಸಮಯದಲ್ಲಿ ಸಿಯಾ ತಾನು ಮತ್ತು ಸ್ನೇಹಿತ ಚೇತನ್‌ ಸೇರಿ ಕೇತನ್‌ ನನ್ನು ಕೊಲ್ಲಲು ಯೋಜಿಸಿದ್ದಾಗಿ ಹೇಳಿದ್ದಾಳೆ ಎನ್ನಲಾಗಿದೆ. ಸಿಯಾ ಕೋಟೆಯ ಎತ್ತರದ ಸ್ಥಳಕ್ಕೆ ನಡೆದು ಹೋಗಿ ತನ್ನ ಶೂ ಲೇಸ್‌ಗಳನ್ನು ಕಟ್ಟಿಕೊಳ್ಳುವಂತೆ ನಟಿಸುವುದು ಯೋಜನೆಯ ಉದ್ದೇಶವಾಗಿತ್ತು. ಸಿಯಾ ಬಾಗಿದಂತೆ ಚೇತನ್‌ ಹಿಂದಿನಿಂದ ಕೇತನ್‌ ಬಳಿಗೆ ಬರಬೇಕಿತ್ತು. ಚೇತನ್‌ ಚೌಧರಿ ಹಿಂದಿನಿಂದ ಬಂದು ಕೇತನ್‌ನನ್ನು ತಳ್ಳಿದ್ದಾರೆ. ಕೇತನ್‌ ಅಗರ್‌ವಾಲ್‌ ಸಮತೋಲನ ಕಳೆದುಕೊಂಡು ಸುಮಾರು 300 ಅಡಿ ಆಳದ ಕಂದಕಕ್ಕೆ ಬಿದ್ದಿದ್ದಾರೆ ಎಂದು ವರದಿಯಾಗಿದೆ.

ಸಂಪೂರ್ಣ ಮರುಸೃಷ್ಟಿ ಮತ್ತು ಸಿಯಾ ಅವರ ತಪ್ಪೊಪ್ಪಿಗೆಯನ್ನು ವಿಡಿಯೋ ರೆಕಾರ್ಡ್‌ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.