7ನೇ ಹೆರಿಗೆಗೆ ಹೋದ ಅಮ್ಮ, 6ನೇ ಮಗು ಹಸಿವಿನಿಂದ ಸಾವು
ತಿರುವನಂತಪುರಂ: ಏಳನೇ ಮಗುವಿನ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ತಾಯಿಯೊಬ್ಬಳ ಆರೈಕೆ ತಪ್ಪಿದ್ದರಿಂದ ಆಕೆಯ ಇನ್ನೊಂದು ಎರಡು ವರ್ಷದ ಗಂಡು ಮಗು ಮನೆಯಲ್ಲಿ ಹಸಿವಿನಿಂದ ಸಾವಿಗೀಡಾಗಿರುವ ಘಟನೆ ಕೇರಳದ ಆಳಪ್ಪುಳ ಜಿಲ್ಲೆಯ ಕಾರ್ತಿಕಾಪಲ್ಲಿಯ ವಳಿಯಕ್ಕುಳ ನಗರ್‌ನಲ್ಲಿ ನಡೆದಿದೆ.
Sponsoredಮಗುವಿನ ತಂದೆ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು, ತಾಯಿ ತಾರಾ ಗೃಹಿಣಿ. ಈ ದಂಪತಿಗೆ ಆರು ಮಕ್ಕಳಿದ್ದು, ಒಂದು ಮಗು ಈ ಹಿಂದೆಯೇ ಅಸುನೀಗಿತ್ತು. ಮನೆಯಲ್ಲಿ ನಾಲ್ಕು ಹೆಣ್ಣು ಒಂದು ಗಂಡು ಇತ್ತು. ಗಂಡು ಮಗುವಿನ ಹೆಸರು ರಾಕೇಶ್. ಹಸಿವು, ಅಪೌಷ್ಠಿಕತೆಯಿಂದ ಸತ್ತಿರುವ ಮಗು ಇದು.
ತಾರಾ ಅವರು ಏಳನೇ ಮಗುವಿನ ಗರ್ಭಿಣಿಯಾಗಿದ್ದರಿಂದ ಮಕ್ಕಳ ಕಡೆಗೆ ಗಮನ ಕೊಡುವುದು ಕಡಿಮೆಯಾಗಿತ್ತು. ರಾಕೇಶನ ಆರೈಕೆ ಆತನ ನಾಲ್ವರು ಅಕ್ಕಂದಿರಿಗೆ ವಹಿಸಲಾಗಿತ್ತು. ಅವರೂ ಚಿಕ್ಕ ಮಕ್ಕಳಾಗಿದ್ದು, ಕೇವಲ 3ರಿಂದ 12 ವರ್ಷದೊಳಗಿನವರು. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇದ್ದುದ್ದು, ರಾಕೇಶ್‌ಗೆ ಸರಿಯಾದ ಅಹಾರ ದೊರಕದೇ ಮಗು ಸೊರಗಿತ್ತು. ಇತ್ತೀಚೆಗೆ ತಾಯಿ ತಾರಾ ಹೆರಿಗೆಗಾಗಿ ವಂದನಂ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಶನಿವಾರ ಆಕೆಗೆ ಹೆರಿಗೆಯಾಗಿತ್ತು. ಆದರೆ ಭಾನುವಾರ ತಂದೆ ಮಕ್ಕಳನ್ನು ಎಂದಿನಂತೆ ಎಬ್ಬಿಸಿದ್ದು, ರಾಕೇಶ ಕದಲಲಿಲ್ಲ. ಗಾಬರಿಗೊಂಡ ಆತ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ತಲುಪಿದಾಗ ಮಗು ಅಸುನೀಗಿರುವುದಾಗಿ ಹೇಳಿದ್ದಾರೆ.
ಎರಡು ವರ್ಷದ ಮಗುವಿನ ಸರಾಸರಿ ತೂಕ 10-15 ಕೆಜಿ ಇರಬೇಕಿತ್ತು. ಮಗುವಿನ ತೂಕ 7.5 ಕೆಜಿ ಇತ್ತು. ಸತತ ಅಪೌಷ್ಠಿಕತೆಯಿಂದ ಮಗು ಸತ್ತಿರುವುದಾಗಿ ಮರಣೋತ್ತರ ಪರೀಕ್ಷೆಯಲ್ಲಿ ಕಂಡು ಬಂದಿದೆ.
ಇದೀಗ ಮನೆಯಲ್ಲಿ ಉಳಿದಿರುವ ನಾಲ್ಕು ಹೆಣ್ಣುಮಕ್ಕಳ ಜವಾಬ್ದಾರಿಯನ್ನು ಕೇರಳ ಮಕ್ಕಳ ಸಮಿತಿ ತನ್ನ ಸುಪರ್ದಿಗೆ ತೆಗೆದುಕೊಂಡಿದೆ.




