ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ, ಕಳೆದ ಬಜೆಟ್ ಅಧಿವೇಶನದ ಅವಧಿಯಲ್ಲಿ ಜನಪ್ರತಿನಿಧಿಗಳ ಭಾಗವಹಿಸುವಿಕೆಯ ಅಧಿಕೃತ ಅಂಕಿಅಂಶಗಳು ಸಾರ್ವಜನಿಕವಾಗಿ ಹೊರಬಿದ್ದಿದೆ. ಇದರಲ್ಲಿ ದೇಶದ ಅತಿ ಕಡಿಮೆ ಹಾಜರಾತಿ ಹೊಂದಿರುವ ಜನಪ್ರತಿನಿಧಿಗಳ ಪಟ್ಟಿಯಲ್ಲಿ ಕರ್ನಾಟಕದ ಇಬ್ಬರು ಲೋಕಸಭಾ ಸದಸ್ಯರು ಸ್ಥಾನ ಪಡೆದಿರುವುದು ರಾಜ್ಯದ ರಾಜಕೀಯ ವಲಯದಲ್ಲಿ ತೀವ್ರ ಮುಜುಗರ ಉಂಟುಮಾಡಿದೆ.
Sponsoredಕಲಬುರಗಿ ಕ್ಷೇತ್ರವನ್ನು ಪ್ರತಿನಿಧಿಸುವ ಕಾಂಗ್ರೆಸ್ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ಬಜೆಟ್ ಅಧಿವೇಶನದ ಒಟ್ಟು 31 ಕಲಾಪಗಳ ಪೈಕಿ ಒಂದೇ ಒಂದು ದಿನವೂ ಸದನಕ್ಕೆ ಹಾಜರಾಗದೆ ಶೂನ್ಯ ದಾಖಲೆ ನಿರ್ಮಿಸಿದ್ದಾರೆ. ಇವರ ಆಪ್ತ ಮೂಲಗಳು ಕುಟುಂಬದ ಸದಸ್ಯರೊಬ್ಬರ ತೀವ್ರ ಅನಾರೋಗ್ಯ ಮತ್ತು ಐಸಿಯು ಆರೈಕೆಯ ಕಾರಣವನ್ನು ಇದಕ್ಕೆ ನೀಡಿದ್ದರೂ, ಸಂಸತ್ತಿನಲ್ಲಿ ಕ್ಷೇತ್ರದ ಧ್ವನಿ ಸಂಪೂರ್ಣ ಕ್ಷೀಣಿಸಿದೆ. ಆಶ್ಚರ್ಯವೇನೆಂದರೆ ಇವರು ಮಲ್ಲಿಕಾರ್ಜುನ ಖರ್ಗೆಯವರ ಅಳಿಯ ಎಂಬುದು. ರಾಜ್ಯದ ಒಬ್ಬ ಜವಾಬ್ದಾರಿತ ನಾಯಕ ಹಾಗೂ ದೇಶದ ಬುದ್ಧಿವಂತರು ಸೇರುವ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರದ ಮಲ್ಲಿಕಾರ್ಜುನ ಖರ್ಗೆಯವರ ಅಳಿಯನೇ ಈ ರೀತಿ ಬೇಜವಾಬ್ದಾರಿತನದಿಂದ ವರ್ತಿಸುವುದು ಎಷ್ಟು ಸರಿ ಎಂದು ಜನರು ಕಿಡಿ ಕಾರುತ್ತಿದ್ದಾರೆ.
ಮತ್ತೊಂದೆಡೆ, ಬೆಳಗಾವಿ ಕ್ಷೇತ್ರದ ಸಂಸದೆ ಪ್ರಿಯಾಂಕಾ ಸತೀಶ್ ಜಾರಕಿಹೊಳಿ ಅವರು ಕೇವಲ 13 ದಿನಗಳ ಕಾಲ ಕಲಾಪದಲ್ಲಿ ಪಾಲ್ಗೊಳ್ಳುವ ಮೂಲಕ ಕೇವಲ ಶೇ 41.9 ರಷ್ಟು ಕಳಪೆ ಹಾಜರಾತಿಯನ್ನು ದಾಖಲಿಸಿದ್ದಾರೆ. ಇವರು ರಾಜ್ಯದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ಸುಪುತ್ರಿ. ರಾಜ್ಯದ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ತಮ್ಮ ಮಗಳನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದ್ದೇನೂ ಸರಿ ಆದರೆ ಆ ಜವಾಬ್ದಾರಿಗೆ ತಕ್ಕಂತೆ ಕರ್ತವ್ಯ ನಿರ್ವಹಿಸುವುದನ್ನು ಕೂಡ ಹೇಳಿಕೊಡಬೇಕೆಂಬುದು ಜನರ ಒತ್ತಾಸೆ.




