ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಜೂನ್ ತಿಂಗಳಿನಲ್ಲೇ ಮರಣ ಹೊಂದಿದ್ದರೂ ಕೂಡ ಆಯುಷ್ಮಾನ್ ಭಾರತ್ ಯೋಜನೆಯಿಂದ ನಿಮ್ಮ ಗಂಡ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮೆಸೇಜ್ ಕಳುಹಿಸಿದ ವಿಲಕ್ಷಣ ಘಟನೆ ಎಂದು ಛತ್ತೀಸ್ಗಢಲ್ಲಿ ನಡೆದಿದೆ!!
ಛತ್ತೀಸ್‌ಗಢದ ಸರ್ಗುಜಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಛತ್ತೀಸ್‌ಗಢದ ಸಶಸ್ತ್ರ ಪಡೆ ಪಡೆಗಳಲ್ಲಿ ಕಾನ್ಸ್‌ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ದೇವನಾರಾಯಣ್ ರಾಮ್ ಎಂಬುವರು ತೀವ್ರ ಅನಾರೋಗ್ಯದ ಕಾರಣ ಜೂನ್ 26 ರಂದು ಅಂಬಿಕಾಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜೂನ್ 30 ರಂದೇ ಅವರು ಕೊನೆಯುಸಿರೆಳೆದರು. ಆಸ್ಪತ್ರೆಯ ಸಿಬ್ಬಂದಿ ಅಧಿಕೃತ ಮರಣ ಪ್ರಮಾಣಪತ್ರವನ್ನೂ ನೀಡಿದ್ದರು. ಕುಟುಂಬಸ್ಥರು ದುಃಖದಲ್ಲೇ ಅವರ ಅಂತ್ಯಕ್ರಿಯೆಯನ್ನೂ ಪೂರ್ಣಗೊಳಿಸಿದ್ದರು.
ಮೃತರ ಪತ್ನಿ ಸೀಮಾ ಕುಜೂರ್ ಅವರು ಸ್ವತಃ ಆಸ್ಪತ್ರೆಯೊಂದರಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಆಗಸ್ಟ್ ತಿಂಗಳಿನಲ್ಲಿ ಅವರ ಮೊಬೈಲ್‌ಗೆ ‘ಆಯುಷ್ಮಾನ್ ಸಾರಥಿ’ ಸಿಸ್ಟಮ್‌ನಿಂದ ಒಂದು ಸ್ವಯಂಚಾಲಿತ ಎಸ್‌ಎಂಎಸ್ ಬಂದಿದೆ. ‘ಪ್ರಿಯ ದೇವನಾರಾಯಣ್, ನೀವು ಸಂಪೂರ್ಣವಾಗಿ ಗುಣಮುಖರಾಗಿದ್ದು, ಮನೆಗೆ ಮರಳುತ್ತಿದ್ದೀರಿ ಎಂದು ತಿಳಿಸಲು ನಮಗೆ ಸಂತೋಷವಾಗುತ್ತಿದೆ…’ ಎಂಬ ಸಂದೇಶವನ್ನು ನೋಡಿ ಪತ್ನಿ ಸಂಪೂರ್ಣ ಶಾಕ್ ಆಗಿದ್ದಾರೆ.
ಈ ಘಟನೆಯಿಂದ ತೀವ್ರ ಆಕ್ರೋಶಗೊಂಡಿರುವ ಸೀಮಾ ಕುಜೂರ್, ‘ವ್ಯಕ್ತಿಯೊಬ್ಬರು ಮೃತಪಟ್ಟು 42 ದಿನಗಳಾದರೂ ಆರೋಗ್ಯ ಇಲಾಖೆಯ ಆಯುಷ್ಮಾನ್ ವ್ಯವಸ್ಥೆಗೆ ಮಾಹಿತಿ ಇಲ್ಲದಿರುವುದು ಹೇಗೆ ಸಾಧ್ಯ? ಪೊಲೀಸ್ ಸಿಬ್ಬಂದಿಯ ಕುಟುಂಬಕ್ಕೇ ಈ ಸ್ಥಿತಿ ಎದುರಾದರೆ, ಇನ್ನು ಸಾಮಾನ್ಯ ಹಾಗೂ ಬುಡಕಟ್ಟು ಜನರಿಗೆ ಏನೆಲ್ಲಾ ಮೋಸ ಆಗುತ್ತಿರಬೇಡ? ಇದರ ಹಿಂದೆ ದೊಡ್ಡ ಮಟ್ಟದ ಅಕ್ರಮ ಅಥವಾ ದಂಧೆ ಅಡಗಿದೆಯೇ ಎಂಬುದರ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು’ ಎಂದು ಆಗ್ರಹಿಸಿದ್ದಾರೆ.



