ಬೆಳಗಾವಿ: ಸಾಮಾನ್ಯವಾಗಿ ಹಣ, ಆಸ್ತಿ, ಪ್ರೀತಿ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದ ಜಗಳಗಳು ಕೊಲೆಯಲ್ಲಿ ಅಂತ್ಯವಾಗಿರುವುದನ್ನು ಕೇಳಿರುತ್ತೇವೆ. ಆದರೆ ಬೆಳಗಾವಿ ಜಿಲ್ಲೆಯಲ್ಲಿ ಊಟದ ವೇಳೆ ಚಿಕನ್ ತಿನ್ನುವ ವಿಚಾರಕ್ಕೆ ಆರಂಭವಾದ ಕ್ಷುಲ್ಲಕ ಜಗಳವೊಂದು ವ್ಯಕ್ತಿಯ ಪ್ರಾಣವನ್ನೇ ಬಲಿ ಪಡೆದಿರುವ ಘಟನೆ ನಡೆದಿದೆ.
Sponsoredರಾಷ್ಟ್ರಪತಿ ಮುರ್ಮು ಅವರ ಎಡಿಸಿ ಮೇಜರ್ ರಿಷಭ್ ಸಿಂಗ್ ಭಾರತೀಯ ಸೇನೆಯಿಂದ ಸ್ವಯಂ ನಿವೃತ್ತಿ!!
ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಆಗಸ್ಟ್ 23ರ ರಾತ್ರಿ ಈ ಘಟನೆ ನಡೆದಿದ್ದು, ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಕಬೀರ್ ಗಂಜ್ ಮೂಲದ ಸತಿರಾಮ್ ಅಲಿಯಾಸ್ ಸೀತಾರಾಮ್ ಚಂದ್ರದೇವ್ (30) ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅದೇ ಗ್ರಾಮದ ಅರುಣಕುಮಾರ್ ಬಲಿಷ್ಟರ್ ಚವ್ಹಾಣ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಸೀತಾರಾಮ್ ಹಾಗೂ ಆರೋಪಿ ಅರುಣಕುಮಾರ್ ಇಬ್ಬರೂ ಹುಣಶ್ಯಾಳ ಪಿಜಿ ಗ್ರಾಮದ ಪ್ರಿಯಾ ಸ್ಟೀಲ್ಸ್ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಫ್ಯಾಕ್ಟರಿ ಆವರಣದಲ್ಲಿರುವ ಶೆಡ್ನಲ್ಲಿ ಇತರ ಕಾರ್ಮಿಕರೊಂದಿಗೆ ಇಬ್ಬರೂ ವಾಸವಾಗಿದ್ದರು ಎನ್ನಲಾಗಿದೆ.
ಆಗಸ್ಟ್ 23ರಂದು ರಾತ್ರಿ ಕಾರ್ಮಿಕರೆಲ್ಲರೂ ಸೇರಿಕೊಂಡು ಚಿಕನ್ ಅಡುಗೆ ಮಾಡಿಕೊಂಡು ಮದ್ಯಪಾನ ಮಾಡುತ್ತಿದ್ದರು. ಪಾರ್ಟಿ ಮುಗಿದ ಬಳಿಕ ಕೆಲವರು ಊಟ ಮುಗಿಸಿ ಮಲಗಲು ತೆರಳಿದ್ದರು. ಆದರೆ ಮದ್ಯದ ಅಮಲಿನಲ್ಲಿದ್ದ ಅರುಣಕುಮಾರ್ ಮತ್ತು ಸೀತಾರಾಮ್ ಅಲ್ಲಿಯೇ ಉಳಿದಿದ್ದರು.
ಈ ವೇಳೆ ಚಿಕನ್ ತಿನ್ನುವ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಸೀತಾರಾಮ್ ತಾನು ಹೆಚ್ಚು ಚಿಕನ್ ತಿನ್ನುತ್ತಿದ್ದಾನೆ ಎಂದು ಆರೋಪಿ ಅರುಣಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾನೆ ಎನ್ನಲಾಗಿದೆ. ಕ್ಷುಲ್ಲಕ ವಿಚಾರಕ್ಕೆ ಆರಂಭವಾದ ಮಾತುಕತೆ ಕೆಲವೇ ಕ್ಷಣಗಳಲ್ಲಿ ತೀವ್ರ ಜಗಳಕ್ಕೆ ತಿರುಗಿದೆ.
ಜಗಳದ ವೇಳೆ ಅರುಣಕುಮಾರ್ ಅಡುಗೆಗೆ ಬಳಸುತ್ತಿದ್ದ ಚಾಕುವನ್ನು ಕೈಗೆತ್ತಿಕೊಂಡು ಸೀತಾರಾಮ್ಗೆ ಇರಿದಿದ್ದಾನೆ. ಎದೆ ಭಾಗಕ್ಕೆ ಗಂಭೀರ ಗಾಯವಾಗಿದ್ದರಿಂದ ತೀವ್ರ ರಕ್ತಸ್ರಾವ ಸಂಭವಿಸಿ ಸೀತಾರಾಮ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರಪತಿ ಮುರ್ಮು ಅವರ ಎಡಿಸಿ ಮೇಜರ್ ರಿಷಭ್ ಸಿಂಗ್ ಭಾರತೀಯ ಸೇನೆಯಿಂದ ಸ್ವಯಂ ನಿವೃತ್ತಿ!!
ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಮೂಡಲಗಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ಬಂಧಿಸಿದ್ದು, ಘಟನೆಗೆ ನಿಖರ ಕಾರಣ ಹಾಗೂ ಜಗಳದ ಸಂದರ್ಭದ ಕುರಿತು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಚಿಕನ್ ತಿನ್ನುವ ವಿಚಾರದಂತಹ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕಳೆದುಕೊಂಡಿರುವ ಈ ಘಟನೆ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಆತಂಕಕ್ಕೆ ಕಾರಣವಾಗಿದೆ.




