ಅಮೆರಿಕ ಪ್ರವಾಸ ಮುಗಿಸಿ ಮರಳಿದ ಬಳಿಕ ದೇಶದಲ್ಲೇ ಅಲ್ಲೋಲಕಲ್ಲೋಲವಾಗುವ ವಿಚಾರವನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸುವುದಾಗಿ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಎಂಥೆಂಥವರು ಅಧಿಕಾರ ನಡೆಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸುತ್ತೇನೆ. ನನ್ನ ವಿಚಾರದಲ್ಲಿ ದಾಖಲೆಗಳಿದ್ದರೆ ಚರ್ಚೆ ಮಾಡಲಿ. ನಾನು ಯಾವುದೇ ಬೇನಾಮಿ ವ್ಯಾಪಾರ ಮಾಡಿಲ್ಲ” ಎಂದು ಹೇಳಿದರು.
ಇದೇ ವೇಳೆ ಸದನದಲ್ಲಿ KPSC ಅಕ್ರಮದ ಬಗ್ಗೆ ಸಿಎಂ ಉತ್ತರಿಸಿದ್ದ ದಾಖಲೆ ಬಿಡುಗಡೆ ಮಾಡಿದ ಹೆಚ್ಡಿಕೆ, ಆರ್ಡರ್ ಕಾಪಿ ಕೊಡಬೇಡಿ ಅಂತಲೇ KPSC ಸೆಕ್ರೆಟರಿ ಹೇಳಿದ್ದರು. ಆದರೂ ಇದರ ಬಗ್ಗೆ ಸರ್ಕಾರ ಯಾವುದೇ ಅಪೀಲು ಮಾಡಿಲ್ಲ. ನೀವು ಯಾರನ್ನು ಕಾಪಾಡಲು ಮುಂದಾಗಿದ್ದೀರಿ? OMR ತಿದ್ದಿ ಪರೀಕ್ಷೆ ಪಾಸ್ ಆಗಿರುವವರಿಗೆ ರಕ್ಷಣೆ ಕೊಡ್ತಿದ್ದೀರಾ? ಇದಕ್ಕೆ ಉತ್ತರಿಸಿ, ಆಮೇಲೆ ಆರ್ಎಸ್ಎಸ್ ಬಗ್ಗೆ ಟೀಕೆ ಮಾಡಿ. ಕೆಪಿಎಸ್ಸಿ ಸಂಸ್ಥೆ ಈಗ ಬೀದಿಯಲ್ಲಿ ಹರಾಜಿಗೆ ಬಂದಿದೆ. ಈ ಸಂಸ್ಥೆಯನ್ನ ಪರಿಶುದ್ಧ ಮಾಡಲು ಹೋಗಿ ಅಧ್ಯಕ್ಷರನ್ನ ತಂದರು. ನಾನು ಕಡಿಮೆ ಅವಧಿಯ ಸಿಎಂ ಆಗಿರಬಹುದು. ಆದರೆ ನೂನುಬಾಹಿರವಾಗಿ ಯಾವುದೇ ಸೂಚನೆ ಯಾರಿಗೂ ಕೊಟ್ಟಿಲ್ಲ. ಕಾನೂನು ಮೀರಿ ರಕ್ಷಣೆ ಕೊಡಿ ಅಂತ ಹೇಳಿಲ್ಲ. ನಾನು ಸಿಎಂ ಆಗಿದ್ದಾಗ ದಲಿತರನ್ನು ಕೆಪಿಎಸ್ಸಿ ಅಧ್ಯಕ್ಷರಾಗಿ ಮಾಡಿದ್ದೆ. ನನ್ನ ಸಂಬಂಧಿಕರನ್ನಾಗಲಿ, ಆಪ್ತರಿಗಾಗಲಿ ಅಧ್ಯಕ್ಷರನ್ನಾಗಿ ಮಾಡಿರಲಿಲ್ಲ ಎಂದವರು ತಿಳಿಸಿದ್ದಾರೆ.
ಸೆಪ್ಟೆಂಬರ್ 2ರ ರಾತ್ರಿ ಅಮೆರಿಕ ಪ್ರವಾಸಕ್ಕೆ ತೆರಳಲಿದ್ದು, ಸೆಪ್ಟೆಂಬರ್ 12ರಂದು ವಾಪಸ್ ಆಗುವುದಾಗಿ ತಿಳಿಸಿದರು. ‘ಅಕ್ಕ’ ಸಂಘಟನೆಯ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಒತ್ತಾಯಪೂರ್ವಕವಾಗಿ ಆಹ್ವಾನ ನೀಡಿದ್ದು, ಇಷ್ಟವಿಲ್ಲದಿದ್ದರೂ ಅವರ ಅಕ್ಕರೆಯ ಒತ್ತಾಯಕ್ಕೆ ಮಣಿದು ಕಾರ್ಯಕ್ರಮಕ್ಕೆ ತೆರಳುತ್ತಿದ್ದೇನೆ ಎಂದರು.



