ಬಂಟ್ವಾಳ: ಹಣ ವಾಪಸ್ ಕೇಳಿದ್ದಕ್ಕೆ ಚೂರಿ ಇರಿತ ಆರೋಪ; ಪ್ರಕರಣ ದಾಖಲು
ಬಂಟ್ವಾಳ: ಹಣದ ವಿಷಯಕ್ಕೆ ಕುರಿತು ಉಂಟಾದ ವಿವಾದದಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳದ ಅಜಿತ್ ಕುಮಾರ್ ಶೆಟ್ಟಿ (28) ವಶಕ್ಕೆ ಪಡೆಯಲಾದ ವ್ಯಕ್ತಿ.
Sponsoredಬಂಟ್ವಾಳ ಬಿ ಮೂಡಾ ಗ್ರಾಮದ ಉದಯ್ ಎನ್ನುವವರಿಂದ ಆರೋಪಿ ಹಣ ಪಡೆದಿದ್ದು, ಅದನ್ನು ಪಾವತಿ ಮಾಡಲು ಬಾಕಿಯಿತ್ತು. ಈ ಹಣ ಉದಯ್ ವಾಪಸ್ ಕೇಳುತ್ತಿದ್ದರು. ಅ.17 ರ ರಾತ್ರಿ ಹಣವನ್ನು ವಾಪಸ್ ನೀಡುವುದಾಗಿ ಆರೋಪಿ ತಿಳಿಸಿದ್ದು, ಉದಯ್‌ರನ್ನು ಪಲ್ಲಮಜಲಿಗೆ ಬರಲು ಹೇಳಿದ್ದಾನೆ.
ಉದಯ್ ಹಣ ಪಡೆಯುವ ಸಲುವಾಗಿ ಪಲ್ಲಮಜಲು ಜಂಕ್ಷನ್‌ಗೆ ತೆರಳಿದ್ದು, ತನ್ನ ಸಹೋದರ ಲೋಕೇಶ್ (27) ಅವರನ್ನು ಸ್ಥಳಕ್ಕೆ ಬರುವಂತೆ ತಿಳಿಸಿದ್ದರು. ಲೋಕೇಶ್ ಸ್ಥಳಕ್ಕೆ ಬಂದಾಗ ಆರೋಪಿ ಅಜಿತ್ ಉದಯ್ ಅವರಿಗೆ ಚೂರಿಯಿಂದ ಇರಿಯುತ್ತಿರುವುದು ಕಂಡು ಬಂದಿದೆ. ಈ ವೇಳೆ ತಡೆಯಲು ಮುಂದಾದ ಲೋಕೇಶ್ ಅವರನ್ನು ಆರೋಪಿ ಅಟ್ಟಿಸಿಕೊಂಡು ಬಂದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಂತರ ಸ್ಥಳೀಯರು ಗಾಯಗೊಂಡ ಉದಯ್ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಆರೋಪಿ ಪಲ್ಲಮಜಲು ನಿವಾಸಿ ಅಜಿತ್ ಕುಮಾರ್ ಶೆಟ್ಟಿ (28) ಅವರನ್ನು ಅ.18 ರಂದು ಪೊಲೀಸರು ತನಿಖೆಗಾಗಿ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.




