Bengaluru : ಬೆಕ್ಕು ಮರಿ ಹಾಕಿತೆಂದು ಗಂಡು ಬೆಕ್ಕಿನ ಯಜಮಾನನೊಂದಿಗೆ ಮಹಿಳೆ ಜಗಳ – ಪೊಲೀಸ್ ಠಾಣೆ ಮೆಟ್ಟಿಲೇರಿದ ಬೆಕ್ಕಿನ ಪ್ರಣಯ ಪ್ರಕರಣ
Bengaluru : ಮನುಷ್ಯರ ಪ್ರೀತಿ- ಪ್ರೇಮದ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರಿ ಇತ್ಯರ್ಥ ಕಾಣುವುದನ್ನು ನೋಡಿದ್ದೇವೆ. ಆದರೆ ಇದೀಗ ಅಚ್ಚರಿ ಎಂಬಂತೆ ಬೆಕ್ಕಿನ ಪ್ರೇಮ ಪ್ರಕರಣ ಒಂದು ಪೊಲೀಸ್ ಠಾಣೆಯ ಮೆಟ್ಟಿಲೇರಿ, ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
Sponsoredಬೆಂಗಳೂರಿನ ಶೇಷಾದ್ರಿಪುರಂನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಅಕ್ಕ – ಪಕ್ಕದ ಮನೆಗಳ ಮಾಲೀಕರು ಪ್ರತ್ಯೇಕವಾಗಿ ಹೆಣ್ಣು ಹಾಗೂ ಗಂಡು ಬೆಕ್ಕನ್ನು ಸಾಕಿಕೊಂಡಿದ್ದರು. ಎರಡೂ ಬೆಕ್ಕುಗಳ ನಡುವೆ ಪ್ರೀತಿಯುಂಟಾಗಿ ಪ್ರಣಯವೂ ನಡೆದಿದೆ. ಇದರ ಪರಿಣಾಮ ನಾಲ್ಕು ಮರಿಗಳು ಜನಿಸಿವೆ. ಇದೀಗ ಈ ನಾಲ್ಕು ಮರಿಗಳನ್ನು ನೋಡಿಕೊಳ್ಳುವ ವಿಚಾರವಾಗಿ ಎರಡು ಮನೆಯವರ ನಡುವೆ ಗಲಾಟೆ ನಡೆದಿದೆ.
ಹೆಣ್ಣು ಬೆಕ್ಕಿನ ಮಾಲಕಿ ‘ನಮ್ಮ ಬೆಕ್ಕು ನಿಮ್ಮ ಗಂಡು ಬೆಕ್ಕಿನಿಂದಲೇ ನಾಲ್ಕು ಮರಿ ಹಾಕಿದೆ. ಹೀಗಾಗಿ, ಮರಿಗಳನ್ನು ನೀವೇ ಪೋಷಿಸಬೇಕು’ ಎಂಬುದು ಹೆಣ್ಣು ಬೆಕ್ಕಿನ ಮಾಲೀಕರ ವಾದವಾಗಿತ್ತು. ಆದರೆ, ‘ಇದಕ್ಕೂ ನಮಗೂ ಸಂಬಂಧವಿಲ್ಲ’ ಎಂಬುದು ಗಂಡು ಬೆಕ್ಕಿನ ಮನೆಯವರ ಪ್ರತಿವಾದವಾಗಿತ್ತು. ಹೆಣ್ಣು ಬೆಕ್ಕಿನವರು ನಾಲ್ಕು ಮರಿಗಳನ್ನು ತೆಗೆದುಕೊಂಡು ಹೋಗಿ ಪಕ್ಕದ ಮನೆಯಲ್ಲಿ ಬಿಟ್ಟು ಬಂದಿದ್ದರು. ಹೀಗಾಗಿ ಈ ಜಗಳವು ಶನಿವಾರ ವಿಕೋಪಕ್ಕೆ ತಿರುಗಿದೆ.
ಜಗಳ ಪುನಾರಂಭವಾಗಿ ಗಂಡು ಬೆಕ್ಕಿನ ಮಾಲೀಕರು ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ದೂರು ನೀಡಿದ್ದರು. ಯಾವುದೋ ತುರ್ತು ಕರೆ ಎಂದು ಹೊಯ್ಸಳ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿದಾಗ ಬೆಕ್ಕಿನ ಪ್ರಣಯ,ಜಗಳ ಕೇಳಿ ಸುಸ್ತಾದಧಿರು. ಎರಡು ಬೆಕ್ಕಿನ ಮಾಲೀಕರ ಮನವೊಲಿಸಲು ಪ್ರಯತ್ನಿಸಿದರು ಕೂಡ ಅದುಫಲವಾಯಿತು. ಕೊನೆಗೆ ಅಕ್ಕಪಕ್ಕದ ಮನೆಯವರು ನಾವು ಬೆಕ್ಕನ್ನು ನೋಡಿಕೊಳ್ಳುತ್ತೇವೆ ಎಂದು ಮುಂದೆ ಬಂದು ಬೆಕ್ಕನ್ನು ತೆಗೆದುಕೊಂಡು ಹೋಗಿ ಪ್ರಕರಣ ಸುಖಾಂತ್ಯ ಕಂಡಿತು.




