ಪುತ್ತೂರು: ಲ್ಯಾಮಿನೇಷನ್ ವಿಷಯ: ಮೂರು ಪ್ರತ್ಯೇಕ ಪ್ರಕರಣ ದಾಖಲು, ಓರ್ವನಿಗೆ ನ್ಯಾಯಾಂಗ ಬಂಧನ
ಸುಳ್ಯ ಜಾಲ್ಸೂರು ನಿವಸಿ ಫಾತಿಮತ್ ಮಿಸ್ವಾನ (32) ನೀಡಿದ ದೂರಿನಂತೆ ಮೊದಲ ಪ್ರಕರಣ ದಾಖಲಾಗಿದೆ. ಆ.21 ರಂದು ಸಹೋದರ ಹಾಗೂ ತಂಗಿ ಜೊತೆ ಪುತ್ತೂರಿಗೆ ಬಂದಿದ್ದ ಅವರು ದರ್ಬೆಯ ಜನಸೇವಾ ಕೇಂದ್ರದಲ್ಲಿ ಕೆಲ ದಾಖಲಾತಿಗಳನ್ನು ಪ್ರಿಂಟ್ ಹಾಗೂ ಲ್ಯಾಮಿನೇಷನ್‌ಗಾಗಿ ನೀಡಿದ್ದರು. ನಂತರ ದಾಖಲಾತಿಗಳನ್ನು ವಾಪಸ್ ಪಡೆಯುವ ಸಂದರ್ಭದಲ್ಲಿ ಒಂದು ದಾಖಲಾತಿ ಹಾನಿಗೊಳಗಾಗಿರುವುದು ಕಂಡು ಬಂದಿದ್ದು, ಇದನ್ನು ಸರಿಪಡಿಸಲು ಅಥವಾ ಹೊಸ ದಾಖಲಾತಿ ಪಡೆಯಲು ರೂ.300 ನೀಡಲು ಕೇಳಿದ್ದರು ಎನ್ನಲಾಗಿದೆ.
Sponsoredಈ ಸಂದರ್ಭದಲ್ಲಿ ಕೇಂದ್ರದಲ್ಲಿದ್ದ ಅಂಜನಾ ಪೈ ಹಾಗೂ ಸುದರ್ಶನ ಪೈ ಅವಾಚ್ಯವಾಗಿ ನಿಂದನೆ ಮಾಡಿದ್ದು, ಸುದರ್ಶನ ಪೈ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪ ಮಾಡಲಾಗಿದೆ. ಸ್ಥಳದಲ್ಲಿ ಸೇರಿದವರು ಗಲಾಟೆ ಮಾಡಿ, ಗಾಯಗೊಂಡವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಸುದರ್ಶನ ಪೈ ಬಂಧನ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇದಕ್ಕೆ ಪ್ರತಿಯಾಗಿ ಕೇಂದ್ರದ ಮಾಲಕಿ ಅಂಜನಾ ಎಸ್ ಪೈ (50) ನೀಡಿದ ದೂರಿನ ಪ್ರಕಾರ ಇನ್ನೊಂದು ಪ್ರಕರಣ ದಾಖಲಾಗಿದೆ. ಲ್ಯಾಮಿನೇಷನ್‌ಗೆ ನೀಡಿದ್ದ ದಾಖಲಾತಿಯೊಂದು ತಾಂತ್ರಿಕ ದೋಷದಿಂದ ಹಾನಿಗೊಳಗಾದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಗಲಾಟೆ ಮಾಡುವುದಾಗಿ ಸಿಬ್ಬಂದಿ ಮಾಹಿತಿ ನೀಡಿದ ನಂತರ ತಾವು ಅಂಗಡಿಗೆ ತೆರಳಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಅಂಗಡಿಯಲ್ಲಿ ಇಬ್ಬರು ಮಹಿಳೆಯರು ಒಬ್ಬ ಪುರುಷ ಗಲಾಟೆ ಮಾಡುತ್ತಿರುವುದಾಗಿ, ದಾಖಲಾಗಿ ನೀಡಬೇಕು ಅಥವಾ ರೂ.10000 ನೀಡಬೇಕು ಎಂದು ಒತ್ತಾಯಿಸುತ್ತಿರುವುದಾಗಿ, ಸಮಾಧಾನಪಡಿಸಲು ಯತ್ನ ಮಾಡಿದ ವೇಳೆ ಅವಾಚ್ಯವಾಗಿ ನಿಂದನೆ ಮಾಡಿ ಹಲ್ಲೆ ಮಾಡಲಾಗಿದೆ ಎಂದು ಹಾಗೂ ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕುರಿತು ಫಾತಿಮತ್ ಮಿಸ್ವಾನ, ಮುಬಾಶಿರಾ, ಮುಬಾರಿಶ್ ಹಾಗೂ ನೌಶಾದ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇನ್ನು ಗಲಾಟೆ ಮಾಹಿತಿ ಪಡೆದು ಸ್ಥಳಕ್ಕೆ ತೆರಳಿದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ಕುರಿತಂತೆ ಮೂರನೇ ಪ್ರಕರಣ ದಾಖಲಾಗಿದೆ. ಜನರನ್ನು ಚದುರಿಸುವ ವೇಳೆ ಕೆಲವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಕೆಲವರನ್ನು ಠಾಣೆಗೆ ಕರೆದೊಯ್ಯುವಾಗ ನಿಯಾಝ್, ನೌಶಾದ್ ಹಾಗೂ ಇತರರು ತಡೆಯೊಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.



