ಮಂಗಳೂರು: ತಂಗಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಕೊಲೆ, ನಾಲ್ವರಿಗೆ ಶಿಕ್ಷೆ ಪ್ರಕಟ, ಮೂವರಿಗೆ ಜೀವಾವಧಿ
ಮಂಗಳೂರು: ತಂಗಿಯನ್ನು ಪ್ರೀತಿಸುತ್ತಿದ್ದ ಎನ್ನುವ ಕಾರಣಕ್ಕೆ ಯುವಕನನ್ನು ತಲವಾರಿನಿಂದ ಕೊಲೆ ಮಾಡಿದ ಪ್ರಕರಣಕ್ಕೆ ಕುರಿತಂತೆ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣದ ನಾಲ್ವನೇ ಆರೋಪಿಗೂ ವಿವಿಧ ಕಲಂಗಳ ಅಡಿಯಲ್ಲಿ ಶಿಕ್ಷೆಗಳನ್ನು ವಿಧಿಸಲಾಗಿದೆ.
Sponsoredಪ್ರಕರಣದ ವಿವರ:
2019 ರ ಜ.3 ರಂದು ಪಂಜಿಮೊಗರು ಮಾಲಾಡಿ ರಸ್ತೆಯ ಎಂ ವಿ ಶೆಟ್ಟಿ ಕಾಲೇಜು ಬಳಿ ಈ ಕೊಲೆ ನಡೆದಿತ್ತು. ಪ್ರಕರಣದ ಮೊದಲ ಆರೋಪಿ ಸುನೀಲ್ ಕುಮಾರ್ ಅಲಿಯಾಸ್ ಕೌಟಿ ಎಂಬಾತನ ತಂಗಿಯನ್ನು ರಾಕೇಶ್ ಪ್ರೀತಿ ಮಾಡುತ್ತಿದ್ದ. ಈ ಕಾರಣಕ್ಕೆ ಸುನೀಲ್ ಕುಮಾರ್ ಸೇರಿದಂತೆ ಪ್ರವೀಣ್ ಪೂಜಾರಿ ಅಲಿಯಾಸ್ ಚೋಟು, ಪ್ರೀತಮ್ ಅಲಿಯಾಸ್ ಅಭಿ ಹಾಗೂ ರೋಹಿತ್ ಕುಮಾರ್ ಅಲಿಯಾಸ್ ಶೂಟರ್ ಸೇರಿ ರಾಕೇಶ್‌ನನ್ನು ತಲವಾರಿನಿಂದ ಕೊಲೆ ಮಾಡಿದ್ದರು.
ಕಾವೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ನಾಲ್ವರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ ಶಿಕ್ಷೆ ವಿಧಿಸಿದ್ದಾರೆ.
ಮೊದಲ ಮೂರು ಆರೋಪಿಗಳಿಗೆ ಕೊಲೆ ಹಾಗೂ ಸಂಚು ರೂಪಿಸಿದ ಆರೋಪದಲ್ಲಿ ಸುನೀಲ್ ಕುಮಾರ್, ಪ್ರವೀಣ್ ಪೂಜಾರಿ, ಪ್ರೀತಮ್ ಅವರಿಗೆ ಜೀವಾವಧಿ ಶಿಕ್ಷೆ, ತಲಾ ರೂ.15000 ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲಗೊಂಡರೆ ಹೆಚ್ಚುವರಿಯಾಗಿ ಒಂದು ವರ್ಷ ಶಿಕ್ಷೆ.
ಸಾಕ್ಷ್ಯ ನಾಶಪಡಿಸಿದ ಆರೋಪದಲ್ಲಿ ನಾಲ್ವರು ಆರೋಪಿಗಳಿಗೂ ಮೂರು ವರ್ಷಗಳ ಕಾರಾಗೃಹ ಶಿಕ್ಷೆ, ತಲಾ ರೂ.5000 ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದರೆ ಹೆಚ್ಚುವರಿ ಒಂದು ತಿಂಗಳ ಶಿಕ್ಷೆ.
ಅಲ್ಲದೆ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದಡಿಯಲ್ಲಿ ನಾಲ್ಕನೇ ಆರೋಪಿ ರೋಹಿತ್ ಕುಮಾರ್‌ಗೆ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು ರೂ.5000 ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ಒಂದು ತಿಂಗಳ ಶಿಕ್ಷೆ.
ಒಟ್ಟು ರೂ.70,000 ದಂಡದ ಮೊತ್ತದಲ್ಲಿ ರೂ.20000 ಹಣವನ್ನು ಸರಕಾರಕ್ಕೆ ರೂ.50000 ಹಣವನ್ನು ಮೃತ ರಾಕೇಶ್‌ನ ತಂದೆಗೆ ನೀಡುವಂತೆ ನ್ಯಾಯಾಲಯವು ಆದೇಶ ನೀಡಿದೆ.




