ಶಿವಮೊಗ್ಗದಿಂದ ಮಂಗಳೂರಿಗೆ 1.15ಕೋಟಿ ನಗದು ರವಾನೆ: ಲಾಲ್‌ಬಾಗ್ ಬಳಿ ದರೋಡೆ, ದೂರು ದಾಖಲು
ಮಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ನಿಂದ ಇಳಿದು ಲಾಡ್ಜ್‌ಗೆ ತೆರಳುತ್ತಿದ್ದ ವ್ಯಕ್ತಿಯನ್ನು ಕಾರಿನಲ್ಲಿ ಬಂದಿದ್ದ ದರೋಡೆಕೋರರು ಬಲವಂತದಿಂದ ಅಪಹರಣ ಮಾಡಿ, ನಗರದಾದ್ಯಂತ ಸುತ್ತಾಡಿಸಿ, ಬರೋಬ್ಬರಿ ರೂ.1.15 ಕೋಟಿ ನಗದು ಹಣ ಹಾಗೂ 2 ಮೊಬೈಲ್ ಫೋನ್‌ಗಳನ್ನು ದರೋಡೆ ಮಾಡಿ, ಕಾವೂರು ಬಳಿ ಬಿಟ್ಟು ಪರಾರಿಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
Sponsoredದಾವಣಗೆರೆಯಿಂದ ಮಂಗಳೂರಿಗೆ ಹಣದ ಬ್ಯಾಗ್ ತಂದಿದ್ದ ಸತ್ಯನಾರಾಯಣ ಎಂಬುವವರು ನೀಡಿದ ದೂರಿನ ಮೇರೆಗೆ ಮಂಗಳೂರು ಪೊಲೀಸರು ಆರೋಪಿಗಳಿಗಾಗಿ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ.
ಅ.23 ರಂದು ಸತ್ಯನಾರಾಯಣ ಅವರ ಮಾಲೀಕರಾದ ಶಿವಮೊಗ್ಗ ಗಾಂಧಿ ಬಜಾರ್ ನಿವಾಸಿ ನಾಗರಾಜ್ ಎಂಬುವವರು, 1.15 ಕೋಟಿ ನಗದು ಹಣವಿದ್ದ ಎರಡು ಬ್ಯಾಗ್‌ಗಳನ್ನು ನೀಡಿದ್ದರು. ಇದನ್ನು ತಗೊಂಡು ಮಂಗಳೂರಿಗೆ ಹೋಗಿ ಕೆಎಸ್‌ಆರ್‌ಟಿಸಿ ಬಸ್ ಸ್ಟ್ಯಾಂಡ್ ಬಳಿಯ ಲಾಡ್ಜ್‌ನಲ್ಲಿ ಇರು ಅಲ್ಲಿಗೆ ಬರುತ್ತೇನೆ ಎಂದು ತಿಳಿಸಿದ್ದರು.
ಅ.27 ರಂದು ರಾತ್ರಿ 10ಗಂಟೆಗೆ ದಾವಣಗೆರೆಯಿಂದ ಕೆಎಸ್‌ಆರ್‌ಟಿಸಿ ಬಸ್ ಹತ್ತಿ ಅ.28 ರಂದು ಬೆಳಗ್ಗೆ 6 ಗಂಟೆಗೆ ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ ಲಾಲ್‌ಬಾಗ್ ರಾಮಕೃಷ್ಣ ಹಾಸ್ಟೆಲ್ ಬಳಿ ಬಸ್ಸಿನಿಂದ ಇಳಿದಿದ್ದು, ಫುಟ್‌ಪಾತ್‌ನಲ್ಲಿ ತಿಂಡಿ ತಿನ್ನಲು ಹೋಗುತ್ತಿದ್ದಾಗ ಕಪ್ಪು ಬಣ್ಣದ ಕಾರಿನಲ್ಲಿ ಮುಖಕ್ಕೆ ಮಪ್ಲರ್ ಧರಿಸಿಕೊಂಡು ಬಂದ ಅಪರಿಚಿತ ನಾಲ್ವರು ದುಷ್ಕರ್ಮಿಗಳು, ಸತ್ಯನಾರಾಯಣ ಅವರನ್ನು ಬಲವಂತದಿಂದ ಕಾರಿನೊಳಗೆ ಹಾಕಿ ಅಪಹರಿಸಿದ್ದು, ಸುಮಾರು ಎರಡು ಗಂಟೆಗಳ ಕಾಲ ಕಾರಿನಲ್ಲಿ ಸುತ್ತಾಡಿಸಿ, ಅವರ ಬಳಿಯಿದ್ದ 1.5 ಕೋಟಿ ರೂ. ಹಣವಿದ್ದ ಎರಡು ಬ್ಯಾಗ್‌ಗಳು, ಎರಡು ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ನಂತರ ಬೆಳಗ್ಗೆ 8 ಗಂಟೆಯ ಸುಮಾರಿಗೆ ಸತ್ಯನಾರಾಯಣ ಅವರನ್ನು ಕಾವೂರು ಬಸ್ ಸ್ಟ್ಯಾಂಡ್ ಸಮೀಪದ ನಿರ್ಜನ ಗುಡ್ಡದ ಮೇಲೆ ಕಾರಿನಿಂದ ಕೆಳಗೆ ತಳ್ಳಿದ್ದಾರೆ. ದರೋಡೆಕೋರರು ಜೀವ ಬೆದರಿಕೆ ಹಾಕಿ, ಪರಾರಿಯಾಗಿದ್ದಾರೆ.
ಸಂತ್ರಸ್ತ ಸತ್ಯನಾರಾಯಣ ಅವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




