ಪ್ರೇಮಿಗಳಿಬ್ಬರು ಕಾರೊಳಗೆ ಕುಳಿತು ಗಲಾಟೆ ಮಾಡಿಕೊಂಡಿದ್ದು, ಬಳಿಕ ಯುವಕ ಪೆಟ್ರೋಲ್ ಬಾಂಬ್ ಸಿಡಿಸಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶಿರಾ (Shira) ತಾಲೂಕಿನ ಜೋಗಿಹಳ್ಳಿ ಬಳಿ ನಡೆದಿದೆ. ಆದರೆ ಕಾರಿನೊಳಗಡೆ ಇದ್ದ ಯುವತಿ ಸಿನಿಮಾ ಸ್ಟೈಲ್ ನಲ್ಲಿ ಪಾರಾಗಿದ್ದಾಳೆ.
Sponsoredಪ್ರೇಮಿಗಳಾದ ನಾಗೇಂದ್ರ ಮತ್ತು ರಮ್ಯಾ ಉಲ್ಲಾಸ್ ಇಬ್ಬರೂ ಕಾರಿನಲ್ಲಿ ಬೆಂಗಳೂರಿನಿಂದ ಅಂಕೋಲಗೆ ತೆರಳುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಯುವಕ ಕಾರಿನಲ್ಲಿದ್ದ ಯುವತಿ ತಲೆಗೆ ನಾಗೇಂದ್ರ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಆಕೆಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಆಗಿದ್ದೇನು?
ಪೊಲೀಸ್ ಮೂಲಗಳ ಪ್ರಕಾರ, ನಾಗೇಂದ್ರ ಮತ್ತು ರಮ್ಯಾ ಇಬ್ಬರೂ ಬೆಂಗಳೂರಿನಿಂದ ಅಂಕೋಲಾಗೆ ಪ್ರಯಾಣಿಸಲು ಖಾಸಗಿ ಕಾರೊಂದನ್ನು ಬುಕ್ ಮಾಡಿದ್ದರು. ಕಾರು ತುಮಕೂರು ದಾಟುತ್ತಿದ್ದಂತೆ ಇಬ್ಬರ ನಡುವೆ ವೈಯಕ್ತಿಕ ವಿಚಾರವಾಗಿ ತೀವ್ರ ವಾಗ್ವಾದ ಶುರುವಾಗಿದೆ. ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ನಾಗೇಂದ್ರ ತಾನು ಮೊದಲೇ ತಂದಿದ್ದ ಚಾಕುವನ್ನು ತೆಗೆದು ರಮ್ಯಾ ಅವರ ತಲೆ ಹಾಗೂ ದೇಹದ ಭಾಗಗಳಿಗೆ ಮನಬಂದಂತೆ ಇರಿದಿದ್ದಾನೆ. ನಾಗೇಂದ್ರನ ರೌದ್ರಾವತಾರ ಕಂಡು ಪ್ರಾಣಭಯದಿಂದ ತತ್ತರಿಸಿದ ರಮ್ಯಾ, ಜೀವ ಉಳಿಸಿಕೊಳ್ಳಲು ಚಲಿಸುವ ಕಾರಿನಿಂದಲೇ ಹೆದ್ದಾರಿಗೆ ಜಿಗಿದಿದ್ದಾರೆ. ಪರಿಣಾಮ ಅವರಿಗೆ ಗಂಭೀರ ಗಾಯಗಳಾಗಿವೆ.
ಕಾರಿನೊಳಗೆ ನಡೆಯುತ್ತಿದ್ದ ಈ ಭೀಕರ ದೃಶ್ಯವನ್ನು ಕಂಡು ಗಾಬರಿಯಾದ ಚಾಲಕ ತಕ್ಷಣವೇ ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿ ಕೆಳಗಿಳಿದಿದ್ದಾನೆ. ಡ್ರೈವರ್ ಹೊರಬರುತ್ತಿದ್ದಂತೆ ಕಾರಿನೊಳಗಿದ್ದ ನಾಗೇಂದ್ರ ಸೆಂಟ್ರಲ್ ಲಾಕಿಂಗ್ ಸಿಸ್ಟಮ್ ಬಳಸಿ ಒಳಗಿನಿಂದ ಎಲ್ಲ ಬಾಗಿಲುಗಳನ್ನು ಬಂದ್ ಮಾಡಿಕೊಂಡಿದ್ದಾನೆ. ಮರುಕ್ಷಣವೇ ಕಾರಿನೊಳಗೆ ಭಾರಿ ಪ್ರಮಾಣದ ಸ್ಫೋಟ ಸಂಭವಿಸಿದ್ದು, ಇಡೀ ವಾಹನ ಕ್ಷಣಾರ್ಧದಲ್ಲಿ ಹೊತ್ತಿಕೊಂಡಿದೆ. ನಾಗೇಂದ್ರ ತಾನು ಮುಂಚಿತವಾಗಿಯೇ ರೆಡಿ ಮಾಡಿಕೊಂಡು ತಂದಿದ್ದ ‘ಪೆಟ್ರೋಲ್ ಬಾಂಬ್’ ಅನ್ನು ಸ್ಫೋಟಿಸಿಕೊಂಡಿದ್ದು, ಹೊರಬರಲಾರದೆ ಕಾರಿನೊಳಗೇ ಜೀವಂತವಾಗಿ ಸುಟ್ಟು ಕರಕಲಾಗಿದ್ದಾನೆ.
ಘಟನಾ ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅಶೋಕ್ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ರಮ್ಯಾ ಅವರನ್ನು ತಕ್ಷಣವೇ ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.




