ಉಜಿರೆ: ಕಾಶಿಬಿಟ್ಟುವಿನಲ್ಲಿರುವ ಅಭ್ಯಾಸ್ ಪಿ.ಯು ಕಾಲೇಜಿನಲ್ಲಿ ನಶಾ ಮುಕ್ತ ಭಾರತ ಕಾರ್ಯಕ್ರಮ ಅಭ್ಯಾಸ್ ಸಭಾಂಗಣದಲ್ಲಿ ನಡೆಯಿತು.
Sponsoredಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ಅಭ್ಯಾಸ್ ಪಿ.ಯು ಕಾಲೇಜಿನ ಅಧ್ಯಕ್ಷರಾದ ಕಾರ್ತಿಕೇಯ ಎಂ. ಎಸ್ ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಯಾದ ಬೆಳ್ತಂಗಡಿ ತಾಲೂಕಿನ ಪೊಲೀಸ್ ಉಪ -ನೀರಿಕ್ಷಕರಾದ ಸಿಕಂದರ್ ಪಾಶ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.
ಕಾರ್ತಿಕೇಯ ಎಂ. ಎಸ್ ರವರು ವಿದ್ಯಾರ್ಥಿಗಳನ್ನು ಕುರಿತು, ಯುವಜನರೇ, ನಶೆ ನಮ್ಮ ದೇಹಕ್ಕಷ್ಟೇ ಅಲ್ಲ ನಮ್ಮ ದೇಶದ ಭವಿಷ್ಯಕ್ಕೂ ಮಾರಕ. ಡ್ರಗ್ಸ್ ಮುಕ್ತ ಭಾರತ ಕಟ್ಟುವುದು ನಮ್ಮೆಲ್ಲರ ಕರ್ತವ್ಯ, ಇದೇ ನಿಜವಾದ ದೇಶಭಕ್ತಿ ಎನ್ನುತ್ತಾ ಹಲವಾರು ವಿಷಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.
ಮುಖ್ಯ ಅತಿಥಿಗಳಾದ ಬೆಳ್ತಂಗಡಿ ತಾಲೂಕಿನ ಪೊಲೀಸ್ ಉಪ -ನೀರಿಕ್ಷಕ ಸಿಕಂದರ್ ಪಾಶ ರವರು ವಿದ್ಯಾರ್ಥಿಗಳಿಗೆ NDPS ಕಾಯ್ದೆ, 1985ರ ಪ್ರಕಾರ ಮಾದಕ ವಸ್ತುಗಳ ಸೇವನೆ, ಹೊಂದಾಣಿಕೆ ಮತ್ತು ಸಾಗಾಣಿಕೆ ಸಂಪೂರ್ಣ ಅಪರಾಧ, ಇದರಲ್ಲಿ ಸಿಕ್ಕಿಬಿದ್ದರೆ 10 ವರ್ಷದಿಂದ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಆದ್ದರಿಂದ ಡ್ರಗ್ಸ್ ಗೆ ‘ನೋ’ ಹೇಳಿ ನಶಾ ಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸಿ, ಮಕ್ಕಳೇ, ನಿಮ್ಮ ಬದುಕು ಬೆಲೆಬಾಳುವ ಪುಸ್ತಕದಂತೆ, ಡ್ರಗ್ಸ್ ಅದರ ಪುಟಗಳನ್ನು ಸುಡುತ್ತದೆ. ಹಾಗಾಗಿ ನಶೆ ಬೇಡ ಎಂದು ಹೇಳಿ, ನಶಾ ಮುಕ್ತ ಭಾರತದ ಕನಸಿಗೆ ಕೈಜೋಡಿಸಿ ಎಂದರು. ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ವಿದ್ಯಾರ್ಥಿ ಸ್ವಸ್ತಿ ಶ್ರೀ ಹೆಬ್ಬಾರ್ ಪ್ರಾರ್ಥನೆಗೈದರು. ರಾಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ವಿದ್ಯಾಶ್ರೀ ಬಿ.ಎಸ್ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಸುಧೀರ್ ನಿರೂಪಿಸಿದರು. ಬೋಧಕೇತರ ಸಿಬ್ಬಂದಿ ವರ್ಗದವರೂ, ಸಹಾಯಕ ವೃಂದದವರು ಹಾಗೂ ವಿಧ್ಯಾರ್ಥಿಗಳು ಭಾಗವಹಿಸಿದ್ದರು. ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಚೆನ್ನಬಸವ ವಂದಿಸಿದರು.




