ಸದಾ ತಮ್ಮ ತೀಕ್ಷ್ಣವಾದ ಹಾಗೂ ತೂಕಾವದ ಮಾತುಗಳ ಮೂಲಕ ಹಾಗೂ ನ್ಯಾಯ ಸಮ್ಮತವಾದ ತೀರ್ಪುಗಳನ್ನು ನೀಡುವುದರ ಮೂಲಕ ರಾಜ್ಯಾದ್ಯಂತ ಫೇಮಸ್ ಆಗಿರುವ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಎಂ .ನಾಗಪ್ರಸನ್ನ ಅವರು ಇತ್ತೀಚಿಗೆ ಕಲಾಪದ ಅವಧಿಯಲ್ಲಿ ಒಟ್ಟು 534 ರಿಟ್ ಮತ್ತು ಕ್ರಿಮಿನಲ್ ಅರ್ಜಿಗಳ ವಿಚಾರಣೆ ಪೂರೈಸುವ ಮೂಲಕ ನ್ಯಾಯಮೂರ್ತಿ ಎಂ .ನಾಗಪ್ರಸನ್ನ ಅವರು ಹೈಕೋರ್ಟ್ ಕಲಾಪಗಳ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ಇದರ ಬೆನ್ನಲ್ಲೇ ಅವರ ಕುರಿತಾದ ಕೆಲವು ಆಸಕ್ತಕರ ವಿಚಾರಗಳು ಬಹಿರಂಗವಾಗುತ್ತಿದೆ.
ನಾಗಪ್ರಸನ್ನ ಅವರು ತಮ್ಮದೇ ಆದ ವಿಶಿಷ್ಟ ಕಾರ್ಯಶೈಲಿಗೆ ಹೆಸರಾದವರು. ಇವರ ವೃತ್ತಿಜೀವನದ ಇನ್ನೊಂದು ಕುತೂಹಲಕಾರಿ ಸಂಗತಿಯೂ ಇದೆ. ಏನೆಂದರೆ ನಾಗಪ್ರಸನ್ನ ಅವರು ಒಬ್ಬ ನಟ ಕೂಡ ಆಗಿದ್ದರು. ಹೌದು, 1990ರ ದಶಕದ ಕೊನೆಯಲ್ಲಿ ವಕೀಲರಾಗಿ ಅಭ್ಯಾಸ ಮಾಡುತ್ತಿದ್ದಾಗ, ನಾಗಪ್ರಸನ್ನ ಅವರು ಕೆಲವು ಕನ್ನಡ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರ ನಿರ್ವಹಿಸಿದ್ದರು. ಬಳಿಕ ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶನದ ಹಾಗೂ ರಮೇಶ್ ಅರವಿಂದ್ ಅಭಿನಯದ ರಾಷ್ಟ್ರಪ್ರಶಸ್ತಿ ವಿಜೇತ ‘ಹೂಮಳೆ’ (1998) ಚಿತ್ರದಲ್ಲೂ ಅವರು ನಟಿಸಿದ್ದರು.
ಈ ಚಿತ್ರದಲ್ಲಿ ನಾಗಪ್ರಸನ್ನ ಅವರು ನಾಯಕನ ತಂಗಿಯ ಪ್ರಿಯಕರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಮೇಶ್ ಅರವಿಂದ್ (ಸಂತೋಷ್ ಪಾತ್ರದಲ್ಲಿ)ಸುಮನ್ ನಗರ್ಕರ್ (ಸುಭಾಷಿಣಿ ಪಾತ್ರದಲ್ಲಿ)ಎಚ್. ಜಿ. ದತ್ತಾತ್ರೇಯ (ದತ್ತಣ್ಣ)ಸೋರತ್ ಅಶ್ವಥ್, ಎಚ್. ಜಿ. ಸೋಮಶೇಖರ್ ರಾವ್, ಬಿ. ವಿ. ರಾಧಾ, ವಿನಯಾ ಪ್ರಸಾದ್ ಮುಂತಾದ ದಿಗ್ಗಜ ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಮುಂದೆ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು, ಪ್ರಕರಣಗಳನ್ನು ಅತ್ಯಂತ ಶೀಘ್ರವಾಗಿ ವಿಲೇವಾರಿ ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಪ್ರಸನ್ನ ಅವರು ಮಾಡಿದ ಸಾಧನೆ
ಸೆಪ್ಟೆಂಬರ್ 2ರಂದು ಪ್ರಸನ್ನ ಅವರು ಕರ್ನಾಟಕ ಹೈಕೋರ್ಟ್ನಲ್ಲಿ ಒಟ್ಟೂ 550 ಪ್ರಕರಣವನ್ನು ಆಲಿಸಿದ್ದಾರೆ. ತುರ್ತು ವಿಚಾರಣೆ ಕೋರಿದ್ದ 250 ಪ್ರಕರಣಗಳನ್ನು ಕೇವಲ ಎರಡೂವರೆ ಗಂಟೆಯಲ್ಲಿ ವಿಚಾರಣೆ ನಡೆಸಿದ್ದಾರೆ. 2024ರ ನವೆಂಬರ್ ವೇಳೆಗೆ ಅವರು ಹೈಕೋರ್ಟ್ ಜಡ್ಜ್ ಆಗಿ ಐದು ವರ್ಷ ಪೂರೈಸಿದ್ದರು. ಐದು ವರ್ಷ ಪೂರೈಸುವ ಸಂದರ್ಭದಲ್ಲಿ 16,500ಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿದ್ದರು. 2025ರ ನವೆಂಬರ್ ವೇಳೆಗೆ ಆ ಸಂಖ್ಯೆ 21,924 ಪ್ರಕರಣಗಳಿಗೆ ತಲುಪಿತ್ತು ಎಂದು ವರದಿಯಾಗಿದೆ.



