ಶನಿವಾರ, 24 ಅಕ್ಟೋಬರ್ 2026

ಎರಡು ಲಾರಿಗಳು ಡಿಕ್ಕಿ – ನಡು ರಸ್ತೆಯಲ್ಲಿ ಧ್ವಂಸಗೊಂಡ ಬೃಹತ್ ಗಣೇಶ

ಗಣೇಶ ಚತುರ್ಥಿ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಗಣೇಶ ಕೂರಿಸಲು ದೇಶಾದ್ಯಂತ ಭರ್ಜರಿ ತಯಾರಿ ನಡೆಯುತ್ತಿದೆ. ಇದರ ನಡುವೆ ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯಲ್ಲಿ ಭಕ್ತರ ಮನ ಕಲಕುವ ಘಟನೆಯೊಂದು ನಡೆದಿದೆ. ಮಂಟಪಕ್ಕೆ ತರುತ್ತಿದ್ದ ಬೃಹತ್ ಗಣೇಶ ವಿಗ್ರಹವಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ, ಗಣೇಶನ ವಿಗ್ರಹ ರಸ್ತೆಗೆ ಬಿದ್ದು ಸಂಪೂರ್ಣವಾಗಿ ಧ್ವಂಸಗೊಂಡಿದೆ.

ಸಿದ್ದಿಪೇಟೆ ಜಿಲ್ಲೆಯ ಕೆಲ ಯುವಕರು ಗಣೇಶೋತ್ಸವಕ್ಕಾಗಿ ಹೈದರಾಬಾದ್‌ನಲ್ಲಿ ಬೃಹತ್ ಗಣೇಶ ವಿಗ್ರಹವನ್ನು ಖರೀದಿಸಿದ್ದರು. ವಿಗ್ರಹವನ್ನು ಲಾರಿಯ ಮೇಲೆ ಹೇರಿಕೊಂಡು ತಮ್ಮ ಗ್ರಾಮಕ್ಕೆ ಹೊರಟಿದ್ದರು. ಲಾರಿಯು ಪ್ರಜ್ಞಾಪೂರ್ ಎಂಬಲ್ಲಿನ ಫ್ಲೈಓವರ್ ತಲುಪಿದಾಗ ರಸ್ತೆಯ ಮೇಲಿದ್ದ ಬೋರ್ಡ್‌ಗೆ ವಿಗ್ರಹವು ತಗುಲಬಹುದು ಎಂದು ಗಮನಿಸಿದ ಚಾಲಕ ಲಾರಿಯನ್ನು ಪಕ್ಕಕ್ಕೆ ನಿಲ್ಲಿಸಿದ್ದನು. ಇದೇ ಸಮಯದಲ್ಲಿ ವೇಗವಾಗಿ ಬಂದ ಮತ್ತೊಂದು ಲಾರಿ, ಗಣೇಶ ವಿಗ್ರಹವಿದ್ದ ಲಾರಿಗೆ ಹಿಂದಿನಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಲಾರಿಯ ಮೇಲಿದ್ದ ಬೃಹತ್ ಗಣಪತಿಯ ವಿಗ್ರಹವು ಕೆಳಕ್ಕೆ ಬಿದ್ದು ಸಂಪೂರ್ಣವಾಗಿ ಪುಡಿಯಾಗಿದೆ.

ಈ ಅಪಘಾತದಲ್ಲಿ ಗಣೇಶನ ವಿಗ್ರಹವು ಚೂರಾದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ತಮ್ಮ ನೆಚ್ಚಿನ ದೈವದ ವಿಗ್ರಹ ಈ ರೀತಿ ಧ್ವಂಸಗೊಂಡಿದ್ದನ್ನು ಕಂಡು ಭಕ್ತರು ಕಣ್ಣೀರು ಹಾಕುತ್ತಿದ್ದಾರೆ. ಅಪಘಾತದಲ್ಲಿ ಒಂದು ಕಾರು ಕೂಡ ಜಖಂಗೊಂಡಿದ್ದು, ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕ್ರೇನ್ ಸಹಾಯದಿಂದ ರಸ್ತೆಗೆ ಬಿದ್ದಿದ್ದ ವಿಗ್ರಹದ ಅವಶೇಷಗಳನ್ನು ಮತ್ತು ಲಾರಿಯನ್ನು ತೆರವುಗೊಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.