ತನ್ನ ಗಂಡನಿಗೆ ಹಾವು ಕಚ್ಚಿದ್ದನ್ನು ನೋಡಿ ಗಾಬರಿಗೊಂಡ ಆತನ ಪತ್ನಿ, ಹಿಂದೆ ಟಿವಿಯಲ್ಲಿ ನೋಡಿದ್ದನ್ನು ನೆನಪಿಸಿಕೊಂಡು, ಗಾಯದಿಂದ ವಿಷವನ್ನು ಬಾಯಿಯಿಂದ ಹೀರಿ ತೆಗೆದಿರುವ ಘಟನೆ ನಡೆದಿದೆ. ಆದರೆ ಆಕೆ ವಿಷ ಹೀರಿದ ಬಳಿಕ ಏನಾಯಿತು? ಎನ್ನುವುದರ ಕುರಿತು ವರದಿ ಇಲ್ಲಿದೆ.
Sponsoredಗಂಡನಿಂದ ವಿಷ ಹೀರಿದ ನಂತರ ಮಹಿಳೆಯ ಆರೋಗ್ಯ ಸ್ಥಿತಿಯೂ ಹದಗೆಟ್ಟಿತ್ತು. ಸೌತ್ ಚೈನಾ ಮಾರ್ನಿಂಗ್ ವರದಿ ಪ್ರಕಾರ, ಚೀನಾದ ನೈರುತ್ಯ ಭಾಗದ ಯನನ್ನ ಪ್ರಾಂತ್ಯದ ಯುವಾನ್ಯಾಂಗ್ ಕೌಂಟಿ ಎನ್ನುವಲ್ಲಿ ಈ ಘಟನೆ ನಡೆದಿದೆ. ಹಾವು ಕಚ್ಚಿದ ಕೂಡಲೇ ಗಾಯದ ಜಾಗ ಊದಿಕೊಂಡಿದ್ದು, ರೈತನಿಗೆ ತಲೆಸುತ್ತು ಮತ್ತು ನಿತ್ರಾಣ ಉಂಟಾಗಿತ್ತು. ಇದನ್ನು ನೋಡುತ್ತಿದ್ದಂತೆ ರೈತನ ಪತ್ನಿ, ಹಾವು ಕಚ್ಚಿದ ಭಾಗದಿಂದ ವಿಷವನ್ನು ಹೀರಿ ತೆಗೆದಿದ್ದು, ನಂತರ ರೈತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ವಿಷ ಹೀರಿದ ಮಹಿಳೆಯ ಮೇಲೂ ಕೆಲವೇ ಗಂಟೆಗಳಲ್ಲಿ ಬಾಯಿ, ನಾಲಿಗೆ, ಮುಖ ಮತ್ತು ಕೈ ಕಾಲುಗಳಲ್ಲಿ ಜುಮ್ಮೆನಿಸುವ ಅನುಭವ ಆಗಿದೆ. ಮರುದಿನ ಮಹಿಳೆಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡಿದೆ. ಕೂಡಲೇ ಕುಟುಂಬದವರು ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವೈದ್ಯರು ಪರೀಕ್ಷೆ ಮಾಡಿದಾಗ ದಂಪತಿಯಲ್ಲಿ ಸ್ಥಳೀಯ ನಾಗರಹಾವಿನ ಪ್ರಬೇಧದ ವಿಷದ ಅಂಶ ಪತ್ತೆಯಾಗಿದೆ. ಅನಂತರ ಇಬ್ಬರಿಗೂ ಆಂಟಿವೆನಮ್ ಸಿರಮ್ ಚುಚ್ಚುಮದ್ದು ನೀಡಿದ್ದಾರೆ.
ಚಿಕಿತ್ಸೆ ನೀಡಿದ ಬಳಿಕ ಗಂಡ, ಹೆಂಡತಿ ಇಬ್ಬರೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಕುರಿತು ಚೀನಾದ ಪತ್ರಿಕೆಗಳು ವರದಿಯನ್ನು ಮಾಡಿದೆ. ಹಾವು ಕಚ್ಚಿದ ಸಂದರ್ಭದಲ್ಲಿ ಅದನ್ನು ಬಾಯಿಯಿಂದ ಹೀರುವುದು ಒಂದು ತಪ್ಪು ಕಲ್ಪನೆ. ಇದು ತುಂಬಾ ಅಪಾಯಕಾರಿ ಎಂದು ವೈದ್ಯರು ಎಚ್ಚರ ನೀಡಿದ್ದಾರೆ. ಗಾಯದಿಂದ ಬಾಯಿಯ ಮೂಲಕ ವಿಷ ಹೀರುವಾಗ, ಬಾಯಿಯೊಳಗಿನ ಲೋಳೆಪೊರೆಯಲ್ಲಿರುವ ಸೂಕ್ಷ್ಮ ರಕ್ತನಾಳಗಳ ಮೂಲಕ ವಿಷವು ರಕ್ತಕ್ಕೆ ಸೇರುತ್ತದೆ. ಹೀಗೆ ಮಾಡುವುದರಿಂದ ವಿಷ ದೇಹಕ್ಕೆ ವಿಸ್ತರಣೆಯಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.




