ಶನಿವಾರ, 24 ಅಕ್ಟೋಬರ್ 2026

ದೇಶದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ʼಲೈಂಗಿಕ ಶಿಕ್ಷಣʼ ಕಡ್ಡಾಯ

Education News

ನವದೆಹಲಿ, ಜು.14: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಲು ಹಾಗೂ ಹದಿಹರೆಯದವರಲ್ಲಿ ಜಾಗೃತಿಯನ್ನು ಮೂಡಿಸಲು ಕೇಂದ್ರ ಸರಕಾರ ದೇಶಾದ್ಯಂತ ಇರುವ ಎಲ್ಲಾ ಶಾಲೆ ಮತ್ತು ಕಾಲೇಜುಗಳ ಪಠ್ಯಕ್ರಮದಲ್ಲಿ ಸಮಗ್ರ ದೈಹಿಕ ಹಾಗೂ ಲೈಂಗಿಕ ಶಿಕ್ಷಣವನ್ನು ಅಧಿಕೃತ ವಿಷಯವಾಗಿ ಪರಿಚಯಿಸಲು ನಿರ್ಧಾರ ಮಾಡಿರುವ ಕುರಿತು ಕೇಂದ್ರ ಸರಕಾರ ಸೋಮವಾರ ಸುಪ್ರೀಂಕೋರ್ಟ್‌ಗೆ ಅಧಿಕೃತವಾಗಿ ತಿಳಿಸಿದೆ.

ರಾಷ್ಟ್ರೀಯ ಶಿಕ್ಷಣ ನೀತಿ-2020 (NEP-2020) ರ ಉದ್ದೇಶಗಳಿಗೆ ಅನುಗುಣವಾಗಿ ಎನ್‌ಸಿಇಆರ್‌ಟಿ (NCERT) ಈ ಹೊಸ ಪಠ್ಯಕ್ರಮವನ್ನು ವಿನ್ಯಾಸಗೊಳಿಸಲಿದೆ. ಪ್ರಾಥಮಿಕ ಶಾಲಾ ಹಂತದಿಂದಲೇ ಮಕ್ಕಳ ವಯಸ್ಸಿಗೆ ತಕ್ಕಂತೆ ಈ ಕೆಳಗಿನ ಪ್ರಮುಖ ವಿಷಯಗಳನ್ನು ಬೋಧಿಸಲಾಗುತ್ತದೆ.

ಗುಡ್ ಟಚ್ ಮತ್ತು ಬ್ಯಾಡ್ ಟಚ್: ಮಕ್ಕಳಿಗೆ ಯಾವುದು ಸುರಕ್ಷಿತ ಸ್ಪರ್ಶ ಮತ್ತು ಯಾವುದು ಅಸುರಕ್ಷಿತ ಸ್ಪರ್ಶ ಎಂಬುದನ್ನು ಸರಳವಾಗಿ ಕಲಿಸುವುದು.

ದೌರ್ಜನ್ಯದ ವಿರುದ್ಧ ಜಾಗೃತಿ: ಲೈಂಗಿಕ ದೌರ್ಜನ್ಯದ ಸಂದರ್ಭದಲ್ಲಿ ಮಕ್ಕಳು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಮತ್ತು ಯಾರಿಗೆ ದೂರು ನೀಡಬೇಕು ಎಂಬ ಅರಿವು ಮೂಡಿಸುವುದು.

ದೇಹದ ತಿಳಿವಳಿಕೆ ಮತ್ತು ನೈರ್ಮಲ್ಯ: ವೈಯಕ್ತಿಕ ನೈರ್ಮಲ್ಯ ಹಾಗೂ ಮಾನವ ದೇಹದ ಭಾಗಗಳ ಮೂಲಭೂತ ಮತ್ತು ವೈಜ್ಞಾನಿಕ ಜ್ಞಾನವನ್ನು ನೀಡುವುದು.

ವಿಶೇಷ ತರಬೇತಿ ಪಡೆದ ಶಿಕ್ಷಕರು: ಈ ವಿಷಯವನ್ನು ಬೋಧಿಸಲು ಪ್ರಾಥಮಿಕ ಹಂತದಿಂದಲೇ ವಿಶೇಷ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಲಾಗುತ್ತದೆ. ಪ್ರತಿ ವಾರಕ್ಕೆ ಕನಿಷ್ಠ ಎರಡು ಬಾರಿ 15 ರಿಂದ 20 ನಿಮಿಷಗಳ ಕಾಲ ಈ ಜಾಗೃತಿ ತರಗತಿಗಳನ್ನು ನಡೆಸುವುದು ಕಡ್ಡಾಯವಾಗಲಿದೆ.