ತೆಲಂಗಾಣದ ಇತ್ತೀಚೆಗೆ 48 ವರ್ಷದ ಪ್ರಿನ್ಸಿಪಾಲ್ ಹತ್ಯೆ ಮಾಡಿದ ವಿಚಾರ ಭಾರೀ ಸಂಚಲನ ಮೂಡಿಸಿತ್ತು. ಈ ಪ್ರಕರಣವವನ್ನು ಇದೀಗ ಪೋಲೀಸರು ಭೇದಿಸಿದ್ದಾರೆ. ಹಣ ಮತ್ತು ದುಂದು ವೆಚ್ಚಕ್ಕಾಗಿ ಸಂಚು ರೂಪಿಸಿ ಹತ್ಯೆ ಮಾಡಿದ್ದಾರೆ ಎಂದು ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೊಂಡಮಲ್ಲೇಪಲ್ಲಿಯಲ್ಲಿರುವ ನಾಗಾರ್ಜುನ ಪಬ್ಲಿಕ್ ಶಾಲೆಯ ಪ್ರಾಂಶುಪಾಲರು ಮತ್ತು ನಿರ್ದೇಶಕಿ ಕಲ್ಲು ರೂಪಾ ರೆಡ್ಡಿಯವರನ್ನು ಆ.11 ರಂದು ಹತ್ಯೆ ಮಾಡಲಾಗಿತ್ತು. ಹೈದರಾಬಾದ್ನಲ್ಲಿದ್ದ ಅವರ ಪತಿ ಕರೆ ಮಾಡಿದಾಗ ಪ್ರತಿಕ್ರಿಯಿಸದೇ ಇದ್ದಾಗ ನೆರೆಹೊರೆಯವರಿಗೆ ಮಾಹಿತಿ ನೀಡಿದ್ದರು. ಆಗ ನೆರೆಹೊರೆಯವರು ಮನೆ ಬಳಿ ನೋಡಿದಾಗ ಅವರ ಶವ ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು.
ಪ್ರಾಂಶುಪಾಲೆಯನ್ನು ಹತ್ಯೆ ಮಾಡಿದ್ದು, ಅದೇ ಶಾಲೆಯ 10 ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ವಿಶೇಷ ತಂಡಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 80 ಜನರನ್ನು ವಿಚಾರಣೆ ನಡೆಸಿದ್ದವು. ಈ ವೇಳೆ, ಕೊಂಡಮಲ್ಲೆಪಲ್ಲಿ ಮಂಡಲದ ಎರಡು ಗ್ಯಾಂಗ್ಗಳ ವಿದ್ಯಾರ್ಥಿಗಳು ಈ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಗುರುತಿಸಿದ್ದಾರೆ.
11ನೇ ತಾರೀಖಿನಂದು ರಾತ್ರಿ ಇಬ್ಬರು ವಿದ್ಯಾರ್ಥಿಗಳು ಪ್ರಾಂಶುಪಾಲೆಯ ಮನೆಗೆ ತೆರಳಿದ್ದಾರೆ. ಅದರಲ್ಲಿ ಒಬ್ಬ ವಿದ್ಯಾರ್ಥಿ ಒಳಗೆ ಹೋದರೆ, ಇನ್ನೊಬ್ಬ ಹೊರಗಡೆ ಕಾವಲು ಕಾದಿದ್ದಾನೆ. ಒಳಗಿದ್ದ ವಿದ್ಯಾರ್ಥಿ ರೂಪಾ ರೆಡ್ಡಿ ಅವರನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಆಗ ಅವರು ವಿರೋಧಿಸಿದ್ದಾರೆ. ಈ ವೇಳೆ, ವಿದ್ಯಾರ್ಥಿ ಹಾಕಿಕೊಂಡ ಮಾಸ್ಕ್ ಕಳಚಿ ಬಿದ್ದಿದೆ. ಆಗ ಪ್ರಾಂಶುಪಾಲೆ ಈತನನ್ನು ಗುರುತಿಸಿ ಜೋರಾಗಿ ಕಿರುಚಿದ್ದಾರೆ. ಆಗ ವಿದ್ಯಾರ್ಥಿ ತಕ್ಷಣವೇ ಪ್ರಾಂಶುಪಾಲೆಯನ್ನು ಒಳಮನೆಗೆ ಎಳೆದೊಯ್ದು ಚಾಕುವಿನಿಂದ ಇರಿದಿದ್ದಾನೆ. ಬಳಿಕ, ಮನೆಯಲ್ಲಿದ್ದ 2.20 ಲಕ್ಷ ರೂ.ಗಳನ್ನು ಕಳ್ಳತನ ಮಾಡಿದ್ದಾನೆ. ಇದರಲ್ಲಿ ಹೊರಗಿದ್ದ ವಿದ್ಯಾರ್ಥಿಗೆ 40 ಸಾವಿರ ರೂಪಾಯಿಗಳನ್ನು ನೀಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ತಿಳುವಳಿಕೆ ಹೇಳಿದ್ದಕ್ಕೆ ಕೊಲೆ ಶಂಕೆ
ಕೊಲೆ ಆರೋಪ ಹೊತ್ತ ಈ ವಿದ್ಯಾರ್ಥಿಗಳ ಬ್ಯಾಗ್ಗಳಲ್ಲಿ ಹಿಂದೆ ನಗದು ಮತ್ತು ಮೊಬೈಲ್ ಫೋನ್ ಪತ್ತೆಯಾಗಿದ್ದವು. ಈ ಬಗ್ಗೆ ರೂಪಾ ರೆಡ್ಡಿಯವರು ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ನೀಡಿದ್ದರು. ಅಲ್ಲದೇ ಅವರನ್ನು ಹಾಸ್ಟೆಲ್ನಿಂದ ಮನೆಗೆ ಕಳುಹಿಸಲಾಗಿತ್ತು. ಇದು ಪ್ರಾಂಶುಪಾಲರ ವಿರುದ್ಧ ಅಸಮಾಧಾನಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
‘ಬಾಬು’ ಎಂಬ ಪದದಿಂದ ಪತ್ತೆಯಾದ ಹಂತಕರ ಜಾಡು
ರೂಪಾ ರೆಡ್ಡಿ ತನ್ನ ಚಿಕ್ಕಮ್ಮನೊಂದಿಗೆ ಮಾತನಾಡುವಾಗ ‘ಬಾಬು’ ಎಂಬ ಪದವನ್ನು ಬಳಸಿದ್ದರು. ನಂತರ ಫೋನ್ ಸ್ವಿಚ್ ಆಫ್ ಆಗಿತ್ತು. ಈ ಪದದಿಂದ ಯಾರನ್ನು ಉಲ್ಲೇಖಿಸಿರಬಹುದು ಎಂದು ಜಾಡು ಹಿಡಿದು ಹೊರಟ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿತ್ತು. ಈ ಪದವನ್ನೇ ಆಧರಿಸಿ ತನಿಖಾ ತಂಡ ಶಾಲೆಯ ಅಂಗಳ ತಲುಪಿತ್ತು. ಅಲ್ಲಿ ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಕೊಲೆಯಾದ ದಿನ ಶಾಲೆಗೆ ಗೈರಾಗಿದ್ದ ಐದು ವಿದ್ಯಾರ್ಥಿಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಅದರಲ್ಲಿ 10 ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಕಳೆದ ಕೆಲವು ದಿನಗಳಿಂದ ಬಹಳ ಹಣ ಖರ್ಚು ಮಾಡುವುದು, ಪಾರ್ಟಿಗಳನ್ನು ಮಾಡುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದಾದ ಬಳಿಕ ಇಬ್ಬರನ್ನು ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿತ್ತು.



