ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಪ್ರದೋಷ್ ಸಲ್ಲಿಸಿರುವ ಮಾಫಿ ಸಾಕ್ಷಿ ಅರ್ಜಿಯ ವಿಚಾರಣೆ ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಡೆಯಿತು. ಅರ್ಜಿಗೆ ಸಂಬಂಧಿಸಿದ ಆದೇಶವನ್ನು ನ್ಯಾಯಾಲಯ ಆಗಸ್ಟ್ 24ಕ್ಕೆ ಕಾಯ್ದಿರಿಸಿದೆ. ವಿಚಾರಣೆ ವೇಳೆ ನ್ಯಾಯಾಧೀಶರು ಪ್ರದೋಷ್ಗೆ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿರುವುದರ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರದೋಷ್, ಪ್ರಕರಣದಲ್ಲಿ ಅಪ್ರೂವರ್ ಆಗಲು ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದರು. ಅರ್ಜಿಯಲ್ಲಿರುವ ಅಂಶಗಳನ್ನು ಓದಿ ತಿಳಿದುಕೊಂಡೇ ಸಹಿ ಮಾಡಿರುವುದಾಗಿಯೂ ಹೇಳಿದರು. ರೇಣುಕಾಸ್ವಾಮಿ ಹತ್ಯೆಯಲ್ಲಿ ತನ್ನ ಪಾತ್ರವೇನು ಹಾಗೂ ಇತರ ಆರೋಪಿಗಳ ಪಾತ್ರವೇನು ಎಂಬುದನ್ನು ಅರ್ಜಿಯಲ್ಲಿ ವಿವರಿಸಿರುವುದಾಗಿ ಪ್ರದೋಷ್ ನ್ಯಾಯಾಲಯಕ್ಕೆ ತಿಳಿಸಿದರು.
ಎರಡು ಬಸ್ಗಳಿಗೆ ಒಂದೇ ನಂಬರ್ ಆರೋಪ: ಜಮೀರ್ ಅಹ್ಮದ್ ವಿರುದ್ಧದ ಅರ್ಜಿ ವಜಾ
ಪ್ರದೋಷ್ ಅವರ ವಿದ್ಯಾಭ್ಯಾಸ ಹಾಗೂ ಉದ್ಯೋಗದ ಬಗ್ಗೆಯೂ ನ್ಯಾಯಾಧೀಶರು ಮಾಹಿತಿ ಪಡೆದರು. ತಾವು ಎಂಬಿಎ ಫೈನಾನ್ಸ್ ವ್ಯಾಸಂಗ ಮಾಡಿದ್ದು, ಇಂಗ್ಲಿಷ್ ಓದಲು ಮತ್ತು ಬರೆಯಲು ಬರುತ್ತದೆ ಎಂದು ಅವರು ಹೇಳಿದರು. ಘಟನೆಗೂ ಮುನ್ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದುದಾಗಿ ತಿಳಿಸಿದರು.
\ಮಾಫಿ ಸಾಕ್ಷಿಯಾಗುವ ಅರ್ಜಿಯ ಗಂಭೀರತೆ ಅರಿವಿದೆಯೇ ಎಂದು ನ್ಯಾಯಾಧೀಶರು ಕೇಳಿದಾಗ, ಅರಿವಿದೆ ಎಂದು ಪ್ರದೋಷ್ ಉತ್ತರಿಸಿದರು. ಪ್ರಕರಣದ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸುತ್ತೀರಾ ಎಂಬ ಪ್ರಶ್ನೆಗೆ, “100 ಪರ್ಸೆಂಟ್ ಸತ್ಯ ಹೇಳುತ್ತೇನೆ. ಯಾವುದೇ ಪ್ರಭಾವ ಅಥವಾ ಒತ್ತಡದಿಂದ ಅರ್ಜಿ ಸಲ್ಲಿಸಿಲ್ಲ” ಎಂದು ಸ್ಪಷ್ಟಪಡಿಸಿದರು.
ಎರಡು ಬಸ್ಗಳಿಗೆ ಒಂದೇ ನಂಬರ್ ಆರೋಪ: ಜಮೀರ್ ಅಹ್ಮದ್ ವಿರುದ್ಧದ ಅರ್ಜಿ ವಜಾ
ಇದೇ ವೇಳೆ, ಪ್ರದೋಷ್ ವಿರುದ್ಧ ರೇಣುಕಾಸ್ವಾಮಿ ಕೊಲೆ ಪ್ರಕರಣ ಹೊರತುಪಡಿಸಿ ಬೇರೆ ಯಾವುದೇ ಪ್ರಕರಣಗಳಿಲ್ಲ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜೈಲಿನಲ್ಲಿದ್ದಾಗ ಪ್ರದೋಷ್ ಅವರ ನಡವಳಿಕೆ ಕುರಿತ ವರದಿಯನ್ನೂ ನ್ಯಾಯಾಲಯ ಪರಿಗಣಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ವಿನಯ್ ಕೂಡ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಪ್ರಕರಣದ ಮುಂದಿನ ಬೆಳವಣಿಗೆ ಕುತೂಹಲ ಮೂಡಿಸಿದೆ. ಪ್ರದೋಷ್ ಅವರ ಅರ್ಜಿಗೆ ಸಂಬಂಧಿಸಿದ ನ್ಯಾಯಾಲಯದ ಆದೇಶ ಆಗಸ್ಟ್ 24ರಂದು ಹೊರಬೀಳಲಿದೆ.



