ಶನಿವಾರ, 24 ಅಕ್ಟೋಬರ್ 2026

ಪುತ್ತೂರು: ನಾಪತ್ತೆಯಾದ ನಾಯಿ ಪತ್ತೆ ಮಾಡಿದ ವ್ಯಕ್ತಿಗೆ ರೂ. 50 ಸಾವಿರ ಬಹುಮಾನ!

ಪುತ್ತೂರು:ಕೆಲವರು ಸಾಕುಪ್ರಾಣಿಗಳ ಮೇಲೆ ತಮ್ಮ ಮಕ್ಕಳ ರೀತಿ ಪ್ರೀತಿ ಮಾಡುತ್ತಾರೆ. ಈ ಪ್ರೀತಿಗೆ ಸಾಕ್ಷಿ ಎನ್ನುವಂತೆ ಪುತ್ತೂರಿನಲ್ಲಿ ಒಂದು ಅಪರೂಪದ ಘಟನೆ ನಡೆದಿದೆ. ಇಲ್ಲಿನ ಕಬಕ ಸಮೀಪದ ಪೋಳ್ಯ ನಿವಾಸಿ, ಶ್ವಾನಪ್ರಿಯ ಗಣೇಶ್ ಕೇರ ಅವರು ತಮ್ಮ ನಾಪತ್ತೆಯಾಗಿದ್ದ ಸಾಕುನಾಯಿಯನ್ನು ಪತ್ತೆ ಹಚ್ಚಿಕೊಟ್ಟ ಸ್ಥಳೀಯ ನಿವಾಸಿ ಪುರಂದರ ಅವರಿಗೆ ಘೋಷಿತ 50 ಸಾವಿರ ರೂಪಾಯಿಗಳ ಬಹುಮಾನದ ಚೆಕ್‌ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಗಣೇಶ್ ಕೇರ ಅವರು ‘ಚಿನ್ನು’ ಎಂಬ ಹೆಸರಿನ ದೇಶಿ ತಳಿಯ ನಾಯಿಯನ್ನು ರಸ್ತೆ ಬದಿಯಿಂದ ತಂದು ಅತ್ಯಂತ ಪ್ರೀತಿಯಿಂದ ಸಾಕಿದ್ದರು. ಒಮ್ಮೆ ಈ ನಾಯಿಗೆ ಪಿಟ್ಸ್ ಕಾಯಿಲೆ ಬಂದು ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದಾಗಲೂ, ಗಣೇಶ್ ಅವರು ಸೂಕ್ತ ಚಿಕಿತ್ಸೆ ಕೊಡಿಸಿ ಅದನ್ನು ಗುಣಪಡಿಸಿದ್ದರು.

ಆದರೆ, ಇತ್ತೀಚೆಗೆ ಈ ನಾಯಿ ಹಠಾತ್ತನೆ ನಾಪತ್ತೆಯಾಗಿತ್ತು. ಇದರಿಂದ ಕಂಗಾಲಾದ ಗಣೇಶ್, ತಮ್ಮ ನಾಯಿಯನ್ನು ಹುಡುಕಿಕೊಟ್ಟವರಿಗೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ಸಾಮಾಜಿಕ ಜಾಲತಾಣ ಮತ್ತು ಬ್ಯಾನರ್‌ಗಳ ಮೂಲಕ ಪ್ರಕಟ ಮಾಡಿದ್ದರು.

ಮನೆಯ ಆಸುಪಾಸಿನಲ್ಲೇ ಇದ್ದರೂ ನಾಯಿ ಮಾಲೀಕರ ಕಣ್ಣಿಗೆ ಬಿದ್ದಿರಲಿಲ್ಲ. ನಾಪತ್ತೆಯಾದ ಮೂರು ದಿನಗಳ ನಂತರ ಪುರಂದರ ಅವರು ನಾಯಿಯನ್ನು ಗುರುತಿಸಿ ಮಾಹಿತಿ ನೀಡಿದ್ದರು. ಆದರೆ ಮಾಲೀಕರು ಬರುವಷ್ಟರಲ್ಲಿ ನಾಯಿ ಅಲ್ಲಿಂದ ಬೇರೆಡೆ ಹೋಗಿತ್ತು. ಎರಡು ದಿನಗಳ ಹಿಂದೆ ನಾಯಿ ಮತ್ತೆ ಕಾಣಿಸಿಕೊಂಡಾಗ ಪುರಂದರ ಅವರು ತಕ್ಷಣ ಅದನ್ನು ಹಿಡಿದು ಗಣೇಶ್ ಅವರಿಗೆ ಒಪ್ಪಿಸಿದ್ದಾರೆ.

ತಮ್ಮ ಪ್ರೀತಿಯ ‘ಚಿನ್ನು’ ಮರಳಿ ಸಿಕ್ಕ ಖುಷಿಯಲ್ಲಿ ಗಣೇಶ್ ಅವರು ಪುರಂದರ ಅವರನ್ನು ಮನೆಗೆ ಕರೆಸಿ, ತಾವು ಘೋಷಿಸಿದಂತೆ 50 ಸಾವಿರ ರೂ.ಗಳ ಚೆಕ್ ಅನ್ನು ಹಸ್ತಾಂತರಿಸಿದ್ದಾರೆ.