ಆಧುನಿಕ “ಲುಕ್” ಮತ್ತು “ಏರೋಡೈನಾಮಿಕ್ಸ್” ಕಾರಣದಿಂದ ಕಾರುಗಳ ವಿನ್ಯಾಸದಲ್ಲಿ ಜಾರಿಗೆ ತರಲಾದ “ಫ್ಲಷ್ ಡೋರ್ ಹ್ಯಾಂಡಲ್”ಗಳಿಗೆ ಈಗ ಜಗತ್ತಿನಾದ್ಯಂತ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಇವು ತುರ್ತು ಸಂದರ್ಭದಲ್ಲಿ ಜೀವಕ್ಕೇ ಕಂಟಕವಾಗುತ್ತಿವೆ ಎಂದು ಆರೋಪಿಸಲಾಗಿದೆ. ಹೀಗಾಗಿ ಈ ಕಾರಿನ ಡೋರ್ ಜಾರಿಗೆ ತಂದಿದ್ದು ಯಾಕೆ? ಹಿಂಪಡೆದಿದ್ದು ಯಾಕೆ? ಗ್ರಾಹಕರ ವಿರೋಧ ಯಾಕೆ? ಇತ್ಯಾದಿ ವಿಚಾರಗಳನ್ನು ಇಲ್ಲಿ ತಿಳಿಸಲಾಗಿದೆ.
ಹೌದು, ಕಾರುಗಳಿಗೆ ಮಾಡರ್ನ್ ಲುಕ್ ಮತ್ತು ಉತ್ತಮ ಮೈಲೇಜ್ ಕೊಡುವ ಉದ್ದೇಶದಿಂದ ಪರಿಚಯಿಸಲಾದ ‘ಫ್ಲಶ್ ಡೋರ್ ಹ್ಯಾಂಡಲ್‌ಗಳು’ ಇದೀಗ ವಾಹನ ಸವಾರರ ಪಾಲಿಗೆ ಮರಣ ಶಾಸನವಾಗುತ್ತಿದೆ. ಅಪಘಾತದ ವೇಳೆ ಬಾಗಿಲುಗಳು ಲಾಕ್ ಆಗಿ ಪ್ರಯಾಣಿಕರು ಹೊರಬರಲಾರದೆ ಜೀವ ಕಳೆದುಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದಂತೆ, ಜಾಗತಿಕ ಮಟ್ಟದಲ್ಲಿ ಇವುಗಳ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಚೀನಾ ಬರೋಬ್ಬರಿ 43 ಲಕ್ಷ ಕಾರುಗಳನ್ನು ಹಿಂಪಡೆದಿದ್ದು 2027 ರಿಂದ ಈ ಹ್ಯಾಂಡಲ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಮುಂದಾಗಿದೆ.
ಏನಿದು ಫ್ಲಷ್ ಡೋರ್ ಹ್ಯಾಂಡಲ್?
ಸಾಂಪ್ರದಾಯಿಕ ಕಾರುಗಳಲ್ಲಿ ಹಿಡಿಕೆಗಳು ಹೊರಕ್ಕೆ ಚಾಚಿಕೊಂಡಿರುತ್ತವೆ. ಆದರೆ ಫ್ಲಷ್ ಡೋರ್ ಹ್ಯಾಂಡಲ್ಗಳು ಕಾರಿನ ಬಾಡಿಯೊಂದಿಗೆ ಒಂದೇ ಸಮತಟ್ಟಾದ ಮೇಲ್ಮೈಯಲ್ಲಿರುತ್ತವೆ. ಇವುಗಳಲ್ಲಿ ಮುಖ್ಯವಾಗಿ ಎರಡು ವಿಧ. ಮೊದಲನೆಯದು, ಮೆಕ್ಯಾನಿಕಲ್. ಹಿಡಿಕೆಯ ಒಂದು ಬದಿಯನ್ನು ಬೆರಳಿನಿಂದ ಒತ್ತಿದಾಗ ಹ್ಯಾಂಡಲ್ ಹೊರಬರುತ್ತದೆ, ನಂತರ ಕೈಯಿಂದ ಎಳೆದು ಬಾಗಿಲು ತೆರೆಯಬೇಕು. ಎರಡನೆಯದು, ಎಲೆಕ್ಟ್ರಾನಿಕ್ ಪಾಪ್&ಔಟ್ ಹ್ಯಾಂಡಲ್. ಸೆನ್ಸರ್ ಅಥವಾ ಕೀ ಸಮೀಪಿಸಿದಾಗ ಅಥವಾ ಬಟನ್ ಒತ್ತಿದಾಗ ಸಣ್ಣ ಮೋಟಾರ್ ಮೂಲಕ ಹಿಡಿಕೆ ತಾನಾಗಿಯೇ ಹೊರಬರುತ್ತದೆ. ಆಟೋಮೊಬೈಲ್ ಕಂಪನಿಗಳು, ವಿಶೇಷವಾಗಿ ಪ್ರೀಮಿಯಂ ಮತ್ತು ಇವಿ ತಯಾರಕರು, ಈ ವಿನ್ಯಾಸಕ್ಕೆ ಆದ್ಯತೆ ನೀಡಲು ಪ್ರಮುಖವಾಗಿ ಎರಡು ಕಾರಣಗಳಿವೆ. ಮೊದಲನೆಯದು, ಏರೋಡೈನಾಮಿಕ್ಸ್ ಮತ್ತು ಮೈಲೇಜ್. ಕಾರಿನ ಮೈಮೇಲೆ ಗಾಳಿಯ ಪ್ರತಿರೋಧವನ್ನು (ಏರೋಡೈನಾಮಿಕ್ ಡ್ರಾಗ್) ಕಡಿಮೆ ಮಾಡಿದಷ್ಟೂ ಇವಿ ಕಾರುಗಳ ಬ್ಯಾಟರಿ ರೇಂಜ್, ಇಂಧನ ದಕ್ಷತೆ ಹೆಚ್ಚುತ್ತದೆ. ಹೊರಚಾಚಿದ ಹಿಡಿಕೆಗಳು ಇಲ್ಲದಿದ್ದರೆ ಕಾರಿನ ರೇಂಜ್ನಲ್ಲಿ ಸ್ವಲ್ಪ ಏರಿಕೆ ಕಂಡುಬರುತ್ತದೆ. ಇನ್ನೊಂದು ಕಾರಣ- ಪ್ರೀಮಿಯಂ, ಫ್ಯೂಚರಿಸ್ಟಿಕ್ ಲುಕ್. ಕಾರನ್ನು ಅತ್ಯಾಧುನಿಕ, ಗ್ಯಾಜೆಟ್ ಮಾದರಿಯ ವಸ್ತುವಾಗಿ ಬಿಂಬಿಸಲು ಈ ವಿನ್ಯಾಸ ನೆರವಾಗುತ್ತದೆ.
ಅಲ್ಲದೆ ಕಾರು ಕಾರು ಹೈವೇಗಳಲ್ಲಿ ವೇಗವಾಗಿ ಹೋಗುವಾಗ ಚಾಚಿಕೊಂಡಿರುವ ಹ್ಯಾಂಡಲ್‌ಗಳಿಂದಾಗಿ ಗಾಳಿಯ ಶಬ್ದ (Wind Noise) ಕ್ಯಾಬಿನ್ ಒಳಗಡೆ ಕೇಳಿಸುತ್ತದೆ. ಫ್ಲಶ್ ಹ್ಯಾಂಡಲ್‌ಗಳು ಈ ಶಬ್ದವನ್ನು ಗಣನೀಯವಾಗಿ ಕಡಿಮೆ ಮಾಡಿ, ಪ್ರಯಾಣವನ್ನು ನಿಶ್ಯಬ್ದವಾಗಿಸುತ್ತವೆ. ಕಾರು ಲಾಕ್ ಆದಾಗ ಈ ಹ್ಯಾಂಡಲ್‌ಗಳು ಸಂಪೂರ್ಣವಾಗಿ ಒಳಗೆ ಹೋಗಿ ಲಾಕ್ ಆಗುತ್ತವೆ. ಇದರಿಂದ ಕಳ್ಳರು ಹ್ಯಾಂಡಲ್ ಹಿಡಿದು ಬಾಗಿಲು ಮುರಿಯಲು ಸಾಧ್ಯವಾಗುವುದಿಲ್ಲ. ಈ ಎಲ್ಲಾ ಕಾರಣ ಮುಂದಿಟ್ಟುಕೊಂಡು ಕಾರು ಕಂಪನಿಗಳು ಫ್ಲಶ್ ಡೋರ್ ಹ್ಯಾಂಡಲ್ ನೀಡಲು ಆರಂಭಿಸಿದವು.
ಈಗ ವಿರೋಧ ಯಾಕೆ?
ಫ್ಲಶ್ ಡೋರ್ ಹ್ಯಾಂಡಲ್‌ಗಳು ಸಂಪೂರ್ಣವಾಗಿ ಎಲೆಕ್ಟ್ರಾನಿಕ್ ಸಿಸ್ಟಮ್ ಮತ್ತು ಮೋಟಾರ್‌ಗಳ ಮೂಲಕ ಕಾರ್ಯನಿರ್ವಹಿಸುತ್ತವೆ. ಕಾರುಗಳು ಭೀಕರ ಅಪಘಾತಕ್ಕೀಡಾದಾಗ ಅಥವಾ ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ಆದಾಗ ಇಡೀ ಕಾರಿನ ವಿದ್ಯುತ್ ಸಂಪರ್ಕ (Power Supply) ಕಡಿತಗೊಳ್ಳುತ್ತದೆ. ಇಂತಹ ಸಮಯದಲ್ಲಿ ಹ್ಯಾಂಡಲ್‌ಗಳು ಹೊರಗಡೆ ಬರುವುದೇ ಇಲ್ಲ. ಅಪಘಾತದ ನಂತರ ಕಾರಿನ ಒಳಗೆ ಇರುವವರು ಹೊರಬರಲು ಸಾಧ್ಯವಾಗದೆ ಅಥವಾ ಹೊರಗಿನ ರಕ್ಷಣಾ ಸಿಬ್ಬಂದಿ (Rescuers) ಬಾಗಿಲನ್ನು ತೆರೆಯಲು ಹ್ಯಾಂಡಲ್ ಸಿಗದೆ ಪರದಾಡಬೇಕಾಗುತ್ತದೆ. ಪ್ರತಿಯೊಂದು ಕಾರಿನ ಒಳಗೂ ಎಲೆಕ್ಟ್ರಾನಿಕ್ ಬಟನ್ ಕೆಲಸ ಮಾಡದಿದ್ದಾಗ ತೆರೆಯಲು ‘ಮೆಕ್ಯಾನಿಕಲ್ ಓವರ್‌ರೈಡ್’ ಇರುತ್ತದೆಯಾದರೂ ಅದನ್ನು ಸೀಟಿನ ಕೆಳಗೋ, ಕಾರ್ಪೆಟ್ ಒಳಗೋ ಅಥವಾ ಪ್ಲಾಸ್ಟಿಕ್ ಕವರ್‌ಗಳ ಹಿಂದೆಯೋ ಅಡಗಿಸಿಡಲಾಗಿರುತ್ತದೆ. ಅಪಘಾತದ ಗಾಬರಿಯಲ್ಲಿ ಅಥವಾ ಕಾರಿನೊಳಗೆ ಹೊಗೆ ತುಂಬಿಕೊಂಡಾಗ ಪ್ರಯಾಣಿಕರಿಗೆ ಅದನ್ನು ಹುಡುಕಿ ಬಾಗಿಲು ತೆರೆಯುವುದು ಅಸಾಧ್ಯ.
ಚೀನಾದಲ್ಲಿ Xiaomi ಸೇರಿದಂತೆ ಕೆಲವು ಕಂಪನಿಗಳ ಇವಿ ಕಾರುಗಳು ಅಪಘಾತಕ್ಕೀಡಾದಾಗ ಪವರ್ ಫೇಲ್ಯೂರ್‌ನಿಂದಾಗಿ ಬಾಗಿಲುಗಳು ಲಾಕ್ ಆಗಿದ್ದವು. ಹೊರಗಿದ್ದ ರಕ್ಷಣಾ ಸಿಬ್ಬಂದಿಗೆ ಬಾಗಿಲು ತೆರೆಯಲು ಸಾಧ್ಯವಾಗದೆ ಪ್ರಯಾಣಿಕರು ಕಾರಿನ ಒಳಗೇ ಪ್ರಾಣ ಕಳೆದುಕೊಂಡ ಕೆಲವು ಘಟನೆಗಳ ವಿಡಿಯೋಗಳು ವೈರಲ್ ಆಗಿದ್ದವು. ಅಮೆರಿಕದಲ್ಲೂ ಟೆಸ್ಲಾ ಕಾರುಗಳಲ್ಲಿ ಇಂತಹದ್ದೇ ಕೆಲವು ಗಂಭೀರ ಘಟನೆಗಳು ನಡೆದಿವೆ.
ಭಾರೀ ಮಳೆ ಬಂದಾಗ ಅಥವಾ ಕಾರು ನೀರಿನಲ್ಲಿ ಮುಳುಗಿದಾಗ ನೀರು ಸೀಪೇಜ್ ಆಗಿ ಇವುಗಳ ಎಲೆಕ್ಟ್ರಾನಿಕ್ ಸರ್ಕ್ಯೂಟ್ ಶಾರ್ಟ್ ಆಗಬಹುದು. ಹಿಮ ಬೀಳುವ ಪ್ರದೇಶಗಳಲ್ಲಿ ಇವುಗಳ ಮೇಲೆ ಮಂಜುಗಡ್ಡೆ ಹೆಪ್ಪುಗಟ್ಟಿದರೆ, ಹ್ಯಾಂಡಲ್‌ಗಳು ಹೊರಬರಲು ಸಾಧ್ಯವಾಗದೆ ಲಾಕ್ ಆಗಿಬಿಡುತ್ತವೆ. ಅಪಘಾತದಲ್ಲಿ ಕಾರಿನ ಪಾರ್ಶ್ವಕ್ಕೆ (Side impact) ಪೆಟ್ಟಾದಾಗ ಈ ಸೂಕ್ಷ್ಮ ಹ್ಯಾಂಡಲ್‌ಗಳು ತಕ್ಷಣವೇ ಡ್ಯಾಮೇಜ್ ಆಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಸಾಂಪ್ರದಾಯಿಕ (ಮೆಕ್ಯಾನಿಕಲ್) ಹ್ಯಾಂಡಲ್‌ಗಳಿಗೆ ಹೋಲಿಸಿದರೆ ಈ ಫ್ಲಶ್ ಹ್ಯಾಂಡಲ್‌ಗಳನ್ನು ತಯಾರಿಸಲು ಮತ್ತು ಅವು ಹಾಳಾದರೆ ರಿಪೇರಿ ಮಾಡಲು ಮೂರು ಪಟ್ಟು ಹೆಚ್ಚು ವೆಚ್ಚವಾಗುತ್ತದೆ.
ಈ ಗಂಭೀರ ಸಮಸ್ಯೆಯ ತೀವ್ರತೆಯನ್ನು ಜಗತ್ತಿಗೆ ಮನದಟ್ಟು ಮಾಡಿಕೊಟ್ಟಿದ್ದು ಚೀನಾದ ಇತ್ತೀಚಿನ ಕಠಿಣ ತೀರ್ಮಾನ. ಚೀನಾ ಮಾರುಕಟ್ಟೆಯಲ್ಲಿ ಸುಮಾರು 43 ಲಕ್ಷ ವಾಹನಗಳನ್ನು ರಿಕಾಲ್ (ಹಿಂಪಡೆಯುವಿಕೆ) ಮಾಡಲಾಗಿದೆ. ಇದರಲ್ಲಿ ಟೆಸ್ಲಾದ ಸುಮಾರು 29 ಲಕ್ಷ ಕಾರುಗಳು ಮತ್ತು ಇತರ ಪ್ರಮುಖ ಜಾಗತಿಕ ಹಾಗೂ ದೇಶೀಯ ಬ್ರ್ಯಾಂಡ್‌ಗಳ 14 ಲಕ್ಷ ವಾಹನಗಳು ಸೇರಿವೆ. ಚೀನಾದ ಮಾರುಕಟ್ಟೆ ನಿಯಂತ್ರಕ ಸಂಸ್ಥೆಗಳು ಕಠಿಣ ನಿಯಮಾವಳಿ ರೂಪಿಸಿವೆ.



