ಶನಿವಾರ, 24 ಅಕ್ಟೋಬರ್ 2026

ಚಿಕ್ಕೋಡಿ : ಕುಡಿದು ಗಲಾಟೆ ಮಾಡಿದ ಆರೋಪಿಗೆ 50 ಸಸಿ ನೆಡುವ ಶಿಕ್ಷೆ ವಿಧಿಸಿದ ಕೋರ್ಟ್

ಏನಾದರೂ ತಪ್ಪು ಮಾಡಿದ ಆರೋಪಿಗೆ ಜೈಲು ಶಿಕ್ಷೆ ವಿಧಿಸುವುದು ಅಥವಾ ದಂಡವನ್ನು ಹಾಕುವುದು ಸಾಮಾನ್ಯ. ಆದರೆ ಇದೀಗ ಬೆಳಗಾವಿಯ ಚಿಕ್ಕೋಡಿಯಲ್ಲಿ ಒಂದು ಅಪರೂಪದ ಘಟನೆ ನಡೆದಿದ್ದು ತಪ್ಪು ಮಾಡಿದ ಆರೋಪಿಗೆ ತಾಲೂಕು ಕೋರ್ಟ್ 50 ಸಸಿಗಳನ್ನು ನೆಡುವ ಶಿಕ್ಷೆಯನ್ನು ವಿಧಿಸಿದೆ.

ಹೌದು, ಕುಡಿದು ಗಲಾಟೆ ಮಾಡಿದ ಆರೋಪಿಗೆ ಚಿಕ್ಕೋಡಿ JMFC ನ್ಯಾಯಾಲಯ ವಿಭಿನ್ನ ರೀತಿಯ ಶಿಕ್ಷೆ ಪ್ರಕಟಿಸಿದೆ. ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಅನಿಲ ನಿಂಗಪ್ಪ ಪೂಜಾರಿ ಎಂಬಾತನಿಗೆ ಕುಡಿದು ಗಲಾಟೆ ಮಾಡಿದ ಆರೋಪದಡಿ 50 ಸಸಿಗಳನ್ನು ನಡಬೇಕು ಎಂದು ಕೋರ್ಟ್ ಆದೇಶಿಸಿದೆ. ನ್ಯಾಯಾಲಯದ ಆದೇಶದಂತೆ ಆರೋಪಿ ಚಿಕ್ಕೋಡಿ ನ್ಯಾಯಾಲಯದ ಆವರಣದಲ್ಲಿ 25 ಸಸಿಗಳು ಹಾಗೂ ಸದಲಗಾ ಪೊಲೀಸ್ ಠಾಣೆ ಆವರಣದಲ್ಲಿ 25 ಸಸಿಗಳು ಸೇರಿದಂತೆ ಒಟ್ಟು 50 ಸಸಿಗಳನ್ನು ನೆಟ್ಟಿದ್ದಾನೆ.

ವಿಶೇಷವೆಂದರೆ, ಆರೋಪಿ ತನ್ನ ಪತ್ನಿಯೊಂದಿಗೆ ಸೇರಿ ಕೋರ್ಟ್ ಆವರಣ ಹಾಗೂ ಪೊಲೀಸ್ ಠಾಣೆ ಆವರಣದಲ್ಲಿ ಸಸಿ ನೆಡುವ ಮೂಲಕ ನ್ಯಾಯಾಲಯದ ಆದೇಶವನ್ನು ಪಾಲಿಸಿದ್ದಾನೆ.ತಪ್ಪಿಗೆ ಶಿಕ್ಷೆಯಾಗಿ ಪರಿಸರ ಬೆಳೆಸುವಂತಹ ಕ್ರಮಕ್ಕೆ ನ್ಯಾಯಾಲಯ ಮುಂದಾಗಿರುವುದು ಸಾರ್ವಜನಿಕರ ಗಮನ ಸೆಳೆದಿದೆ. ಸಾಮಾನ್ಯ ಶಿಕ್ಷೆಯ ಬದಲಿಗೆ ಮರ-ಗಿಡಗಳನ್ನು ಬೆಳೆಸುವ ಮೂಲಕ ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಶಿಕ್ಷೆ ನೀಡಿರುವುದು ವಿಭಿನ್ನ ತೀರ್ಪು ಎಂಬ ಚರ್ಚೆ ನಡೆಯುತ್ತಿದೆ. ಕೋರ್ಟ್ ಆದೇಶ ಭಾರಿ ಮೆಚ್ಚುಗೆಗೂ ಪಾತ್ರವಾಗಿದೆ.