ಶನಿವಾರ, 24 ಅಕ್ಟೋಬರ್ 2026

ಮಂಗಳೂರು : ಕಾಲೇಜು ವಿದ್ಯಾರ್ಥಿಗಳ ಮೇಲೆ ಗೋಡೆ ಕುಸಿತ – ಓರ್ವ ಸಾವು, ನಾಲ್ವರಿಗೆ ಗಾಯ

ದಕ್ಷಿಣ ಕನ್ನಡ ಜಿಲ್ಲಾ ಆಲ್ ಕಾಲೇಜ್ ಸ್ಟೂಡೆಂಟ್ಸ್ ಯೂನಿಯನ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ವೇಳೆ ಕಟ್ಟಡದ ಮೊದಲ ಮಹಡಿಯ ತಡೆ ಗೋಡೆ ಕುಸಿದ್ದ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ಮೃತಪಟ್ಟ ವಿದ್ಯಾರ್ಥಿಯನ್ನು ಹಳೆಅಂಗಡಿಯ ಮೊಹಮ್ಮದ್ ಶಮಾಜ್ (16) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಸುರಿಂಜೆ ನಿವಾಸಿ ಮೊಹಮ್ಮದ್ ಶನಾನ್ (18), ಅಡ್ಯಾರ್‌ನ ಹನೀಫ್ (23), ಕಸ್ಬಾ ಬೆಂಗ್ರೆಯ ಮೊಹಮ್ಮದ್ ಶಕೀಲ್ ಹುಸೇನ್ (18) ಹಾಗೂ ಕಾವೂರಿನ ಗಾಂಧಿನಗರ ನಿವಾಸಿ ದಾವೂದ್ ಫರ್ಸೀನ್ ಅಹ್ಮದ್ (18) ಎಂದು ಗುರುತಿಸಲಾಗಿದೆ.

ಕಾರ್ಯಕ್ರಮ ನಡೆಯುತ್ತಿದ್ದಾಗ ಶಮಾಜ್ ನೆಲ ಮಹಡಿಯಲ್ಲಿ ನಿಂತಿದ್ದ ವೇಳೆ ಮೇಲಿನಿಂದ ತಡೆ ಗೋಡೆಯ ಒಂದು ಭಾಗ ಅವರ ಮೇಲೆ ಬಿದ್ದಿದೆ ಎನ್ನಲಾಗಿದೆ. ಗೋಡೆ ಕುಸಿದ ತಕ್ಷಣ ಗಾಯಗೊಂಡ ವಿದ್ಯಾರ್ಥಿಗಳನ್ನು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ನೀಡಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಶಮಾಜ್ ಅವರನ್ನು ವೈದ್ಯರು ಬ್ರೇನ್‌ಡೆಡ್‌ ಎಂದು ಘೋಷಿಸಲಾಗಿದೆ. ಘಟನೆ ಕುರಿತು ಪಾಂಡೇಶ್ವರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.