ಅರಸೀಕೆರೆ ಕೋಡಿಮಠದ ಪೀಠಾಧ್ಯಕ್ಷರಾದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಮುಂಬರುವ ಆರು ತಿಂಗಳಿನಲ್ಲಿ ಭಾರತಕ್ಕೆ, ಪ್ರಮುಖವಾಗಿ ದಕ್ಷಿಣ ಭಾರತದ ರಾಜ್ಯಗಳಿಗೆ ಮಹಾ ಕಂಟಕವೊಂದು ಎದುರಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ಇದು ಈಗ ನಿಜವಾಗಿದೆ ಎಂದು ಹೇಳಲಾಗುತ್ತಿದೆ.
ಹೌದು, ಜಾಗತಿಕ ಹವಾಮಾನ ಬದಲಾವಣೆ ಹಾಗೂ ‘ಸೂಪರ್ ಎಲ್ ನಿನೋ’ ಪರಿಣಾಮಗಳ ಕುರಿತು ಅಮೆರಿಕದ ಸುಪ್ರಸಿದ್ಧ ‘ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್’ ನೀಡಿರುವ ಹೊಸ ಸಂಶೋಧನಾ ವರದಿಯು ಕೋಡಿಶ್ರೀಗಳ ಮಾತುಗಳಿಗೆ ಪೂರಕವಾಗಿರುವಂತೆ ಕಾಣುತ್ತಿದ್ದು, ಸಾರ್ವಜನಿಕರಲ್ಲಿ ಭಾರೀ ಆತಂಕ ಹಾಗೂ ಚರ್ಚೆಯನ್ನು ಹುಟ್ಟುಹಾಕಿದೆ.
ಚಿಕಾಗೋ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್ಸ್ಟಿಟ್ಯೂಟ್ ಸಂಯೋಜಿತ ‘ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್’ ನಡೆಸಿರುವ ಅಧ್ಯಯನವು, ಜಾಗತಿಕ ತಾಪಮಾನವು ಸಾಧಾರಣಕ್ಕಿಂತ 1.2 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಳವಾಗಲಿದ್ದು, ‘ಸೂಪರ್ ಎಲ್ ನಿನೋ’ ಪ್ರಭಾವದಿಂದಾಗಿ ಭಾರತದ ಮುಂಗಾರು ಮಳೆ ಸಂಪೂರ್ಣ ಅಸ್ತವ್ಯಸ್ತಗೊಳ್ಳಲಿದೆ. ಇದರಿಂದ ದಕ್ಷಿಣ ಭಾರತದ ರಾಜ್ಯಗಳು ತೀವ್ರ ಬಿಸಿಲು, ಬರ ಹಾಗೂ ಹವಾಮಾನ ವೈಪರೀತ್ಯಕ್ಕೆ ತುತ್ತಾಗಲಿವೆ. ಈ ಉಷ್ಣತೆಯ ತೀವ್ರತೆಗೆ ದೇಶಾದ್ಯಂತ ಸುಮಾರು 15,800 ಜನರ ಜೀವಹಾನಿಯಾಗಬಹುದು ಎಂದು ಎಚ್ಚರಿಸಿದೆ.
ಆದರೆ ಕೃಷಿಕರ ವಿಷಯದಲ್ಲಿ ಭರವಸೆಯ ಬೆಳಕು ಚೆಲ್ಲಿರುವ ಕೋಡಿಶ್ರೀಗಳು, ಮುಂಗಾರು ಮಳೆ ಕೈಕೊಟ್ಟರೂ ರೈತರು ಕಂಗಾಲಾಗಬೇಕಿಲ್ಲ, ಹಿಂಗಾರು ಮಳೆ ಅಭೂತಪೂರ್ವವಾಗಿ ಸುರಿದು ನಾಡಿನ ಜಲಾಶಯ ಹಾಗೂ ಕೆರೆ-ಕಟ್ಟೆಗಳನ್ನು ಭರ್ತಿ ಮಾಡಲಿದೆ ಎಂದು ಧೈರ್ಯ ತುಂಬಿದ್ದಾರೆ.




