ಮಂಗಳೂರು: ವಿಮಾನ ಪ್ರಯಾಣ ಮತ್ತೆ ದುಬಾರಿ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ ಅದಾನಿ ಗ್ರೂಪ್ ವಿಮಾನ ನಿಲ್ದಾಣದ ಪ್ರಯಾಣಿಕರ ಬಳಕೆದಾರರ ಅಭಿವೃದ್ಧಿ ಶುಲ್ಕವನ್ನು (ಯೂಸರ್ ಡೆವಲಪ್‌ಮೆಂಟ್ ಫೀ, ಯುಡಿಎಫ್) ಮುಂಬರುವ ವರ್ಷಗಳಲ್ಲಿ ಹಂತ ಹಂತವಾಗಿ ಸುಮಾರು ಎರಡು ಪಟ್ಟು (ಶೇ. 96-97 ರಷ್ಟು) ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಿದೆ.
Sponsoredಕಾರಣ?
ವಿಮಾನ ನಿಲ್ದಾಣದ ರೂ.4,200 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಮಾಸ್ಟರ್ ಪ್ಲಾನ್ ವಿಸ್ತರಣಾ ಯೋಜನೆ (ಟರ್ಮಿನಲ್ ವಿಸ್ತರಣೆ, ರನ್‌ವೇ ಅಭಿವೃದ್ಧಿ ಮತ್ತು ಮೂಲಸೌಕರ್ಯ ಸುಧಾರಣೆ) ಹಾಗೂ ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಈ ದರ ಪರಿಷ್ಕರಣೆಗಾಗಿ ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರಕ್ಕೆ (ಎಇಆರ್‌ಎ) ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಪ್ರಸ್ತಾವಿತ ದರ ಏರಿಕೆಯ ಪ್ರಮುಖ ವಿವರಗಳು ಇಲ್ಲಿವೆ:
ದೇಶೀಯ ನಿರ್ಗಮನ ಶುಲ್ಕ (ಡೊಮೆಸ್ಟಿಕ್ ಡಿಪಾರ್ಚರ್): ಪ್ರಸ್ತುತ ಇರುವ ರೂ.735 ರಿಂದ ಹಂತ ಹಂತವಾಗಿ ಹೆಚ್ಚಳವಾಗಿ, 2031ರ ಮಾರ್ಚ್ ವೇಳೆಗೆ ರೂ.1,440 ಕ್ಕೆ ತಲುಪಲಿದೆ (ಸುಮಾರು ಶೇ. 96ರಷ್ಟು ಏರಿಕೆ).
ಅಂತರರಾಷ್ಟ್ರೀಯ ನಿರ್ಗಮನ ಶುಲ್ಕ (ಇಂಟರ್‌ನ್ಯಾಷನಲ್ ಡಿಪಾರ್ಚರ್): ಪ್ರಸ್ತುತ ಇರುವ ರೂ.1,120 ರಿಂದ ಏರಿಕೆಯಾಗಿ, 2031ರ ಮಾರ್ಚ್ ವೇಳೆಗೆ ರೂ.2,210 ಕ್ಕೆ ತಲುಪಲಿದೆ (ಸುಮಾರು ಶೇ. 97ರಷ್ಟು ಏರಿಕೆ).
ಆಗಮನ ಶುಲ್ಕಗಳು (ಅರೈವಲ್ಸ್ ಫೀಸ್): ದೇಶೀಯ ಆಗಮನ ಶುಲ್ಕವು ಪ್ರಸ್ತುತ ರೂ.315 ಇದ್ದು ರೂ.620 ಹಾಗೂ ಅಂತರರಾಷ್ಟ್ರೀಯ ಆಗಮನ ಶುಲ್ಕವು ರೂ.480 ಇದ್ದು ರೂ.940 ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ.
ಪ್ರಯಾಣಿಕರ ಮೇಲೆ ಪರಿಣಾಮ
ಈ ಶುಲ್ಕವನ್ನು ವಿಮಾನಯಾನ ಸಂಸ್ಥೆಗಳು ಟಿಕೆಟ್ ಬುಕಿಂಗ್ ಮಾಡುವಾಗಲೇ ನೇರವಾಗಿ ಟಿಕೆಟ್ ದರದಲ್ಲಿ ಸೇರಿಸಿ ಸಂಗ್ರಹಿಸುವುದರಿಂದ, ಮುಂಬರುವ ದಿನಗಳಲ್ಲಿ ಮಂಗಳೂರಿನಿಂದ ಪ್ರಯಾಣಿಸುವವರಿಗೆ ವಿಮಾನಯಾನದ ವೆಚ್ಚ ಮತ್ತಷ್ಟು ಹೆಚ್ಚಾಗಲಿದೆ. ಡಿಸೆಂಬರ್ 1, 2026 ರಿಂದಲೇ ಈ ಪ್ರಸ್ತಾವಿತ ದರ ಜಾರಿಗೆ ಬರಲಿದೆ.




