ಶನಿವಾರ, 24 ಅಕ್ಟೋಬರ್ 2026

ಮಂಡ್ಯ : ತಾಯಿ ಬರ್ತಡೇ ಆಚರಣೆಗೆ ಶಾಸಕರಿಂದ ಸರ್ಕಾರಿ ಆಸ್ಪತ್ರೆ ದುರ್ಬಳಕೆ!!

ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಖಾಸಗಿ ನಾಟಕ ಕಂಪನಿಯವರಿಗೆ ತಯಾರಿಗಾಗಿ ಜಾಗ ಬಿಟ್ಟು ಕೊಟ್ಟು ದಿನಪೂರ್ತಿ ರೋಗಿಗಳನ್ನು ನಿರ್ಲಕ್ಷಿಸಿರುವಂತಹ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆದಿದೆ.

ಶ್ರೀರಂಗಪಟ್ಟಣ ಶಾಸಕ ಎ.ಬಿ. ರಮೇಶ ಬಂಡಿಸಿದ್ದೇಗೌಡ ಅವರ ತಾಯಿಯ ಹುಟ್ಟುಹಬ್ಬದ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆಯಲ್ಲಿ ಮನರಂಜನಾ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಾಮಾಜಿಕ ನಾಟಕವೊಂದನ್ನು ಪ್ರದರ್ಶಿಸಲು ಸಿದ್ಧತೆ ನಡೆಸಲಾಗುತ್ತಿತ್ತು. ಇದಕ್ಕಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ಆವರಣವನ್ನು ಕಲಾವಿದರಿಗೆ ತಯಾರಿಗಾಗಿ ಬಿಟ್ಟು ಕೊಡಲಾಗಿತ್ತು.

ಆದರೆ ಈ ನಾಟಕದ ಸಿದ್ಧತೆಯ ಹೆಸರಿನಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಆಸ್ಪತ್ರೆಯನ್ನು ಖಾಲಿ ಬಿಟ್ಟು ತೆರಳಿದ್ದಾರೆ. ಅತ್ತ ಆಸ್ಪತ್ರೆ ಆವರಣದಲ್ಲಿ ಕಲಾವಿಧರು ನಾಟಕ ತಯಾರಿಯಲ್ಲಿ ಮುಳುಗಿದ್ದಾರೆ. ಮತ್ತೊಂದೆಡೆ ರೋಗಿಗಳು ಆಸ್ಪತ್ರೆ ಸಿಬ್ಬಂದಿ, ವೈದ್ಯರಿಗಾಗಿ ದಿನವಿಡೀ ಕಾಯುವಂತೆ ಆಗಿದೆ. ಆಸ್ಪತ್ರೆಯಲ್ಲಿ ಗಂಟೆಗಟ್ಟಲೆ ಕಾದರೂ ವೈದ್ಯರು ಮಾತ್ರ ಬಾರದೇ ಹೋದ ಹಿನ್ನೆಲೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಆಸ್ಪತ್ರೆಯ ಆವರಣದಲ್ಲೇ ನಾಟಕ ತಯಾರಿಯನ್ನು ಮಾಡಿಕೊಳ್ಳುತ್ತಿದ್ದುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಬಡ ರೋಗಿಗಳಿಗೆ ಅಗತ್ಯ ಸೌಲಭ್ಯ ಒದಗಿಸಲು, ಆಸ್ಪತ್ರೆಯ ತೊಂದರೆಗಳನ್ನು ಸರಿಪಡಿಸಲು ಯಾವುದೇ ಕ್ರಮ ಕೈಗೊಳ್ಳದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು, ತಮ್ಮ ವೈಯಕ್ತಿಕ ಮತ್ತು ಕುಟುಂಬದ ಕಾರ್ಯಕ್ರಮಕ್ಕಾಗಿ ಸರ್ಕಾರಿ ಆಸ್ತಿಯನ್ನು ಈ ರೀತಿ ಅಜಾಗರೂಕತೆಯಿಂದ ಬಳಸಿಕೊಂಡಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಬಡವರ ಆರೋಗ್ಯ ರಕ್ಷಣೆ ಮಾಡಬೇಕಾದ ಆಸ್ಪತ್ರೆಯನ್ನು ಶಾಸಕರು ತಮ್ಮ ತಾಯಿಯ ಹುಟ್ಟುಹಬ್ಬದ ಮೋಜು-ಮಸ್ತಿಗೆ ಮತ್ತು ಮೇಕಪ್ ರೂಮ್ ಆಗಿ ಬಳಸಿರುವುದು ಎಷ್ಟರ ಮಟ್ಟಿಗೆ ಸರಿ? ಇದೇನಾ ನಿಮ್ಮ ಜವಾಬ್ದಾರಿಯುತ ಕಾರ್ಯವೈಖರಿ ಶಾಸಕರೇ?” ಎಂದು ಮಂಡ್ಯ ಹಾಗೂ ಶ್ರೀರಂಗಪಟ್ಟಣದ ಜನತೆ ಆಕ್ರೋಶದಿಂದ ಪ್ರಶ್ನಿಸುತ್ತಿದ್ದಾರೆ.