ಶನಿವಾರ, 24 ಅಕ್ಟೋಬರ್ 2026

ರಾಜ್ಯದ ಅಡಿಕೆ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದ ಮಹಾರಾಷ್ಟ್ರ ಸರ್ಕಾರ!!

ರಾಜ್ಯದಲ್ಲಿ ಬೆಳೆದ ಬೆಳೆಯನ್ನ ಹೊರರಾಜ್ಯಗಳಿಗೆ ಕಳುಹಿಸಲು ಮಹಾರಾಷ್ಟ್ರ ಸರ್ಕಾರ ಕಿರಿಕ್ ಮಾಡುತ್ತಿದ್ದು, ಕರ್ನಾಟಕದಿಂದ ಮಹಾರಾಷ್ಟ್ರ ಮೂಲಕ ಉತ್ತರ ಭಾರತಕ್ಕೆ ಸರಬರಾಜಾಗುವ ಅಡಿಕೆ ಬೆಳೆಗಳನ್ನ ತಡೆಹಿಡಿದು ಕರ್ನಾಟಕ ಅಡಿಕೆ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ.

ಭಾರತದಲ್ಲಿ ಉತ್ಪಾದನೆಯಾಗುವ ಅಡಿಕೆಯ ಒಟ್ಟು ಮಾರುಕಟ್ಟೆ ಮೌಲ್ಯ ಸುಮಾರು 58,664 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದರಲ್ಲಿ ಕರ್ನಾಟಕದ ಪಾಲು ಅತಿಹೆಚ್ಚು. ಯಾಕೆಂದರೆ ಸುಮಾರು 6.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ವಾರ್ಷಿಕವಾಗಿ ಸುಮಾರು 10–11 ಲಕ್ಷ ಟನ್ ಉತ್ಪಾದನೆಯಾಗುತ್ತದೆ.

 ರಾಜ್ಯದ ಪ್ರಮುಖ ಅಡಿಕೆ ಉತ್ಪಾದನಾ ಜಿಲ್ಲೆಯಾದ ಉತ್ತರ ಕನ್ನಡದಿಂದ ಮಧ್ಯಪ್ರದೇಶ ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ ಮಹಾರಾಷ್ಟ್ರ, ಗುಜರಾತ್‌ಗೆ ಹೆಚ್ಚು ಸರಬರಾಜಾಗುತ್ತದೆ. ಇದನ್ನು ಹೊರತುಪಡಿಸಿದರೆ ಪಾಕಿಸ್ತಾನ, ನೇಪಾಳ, ಮ್ಯಾನ್ಮಾರ್, ಖಜಕಿಸ್ತಾನ್, ಅಫ್ಘಾನಿಸ್ತಾನ ಸೇರಿದಂತೆ ಹಲವು ದೇಶಗಳಿಗೂ ಅಲ್ಪ ಪ್ರಮಾಣದಲ್ಲಿ ರಫ್ತಾಗುತ್ತದೆ.

ಮಹರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯದಲ್ಲಿ ಗುಟ್ಕ ಹಾಗೂ ಸುಫರಿ ಕಾರ್ಖಾನೆಗಳಿದ್ದು, ಅಲ್ಲಿಗೂ ಅಡಿಕೆ ಈ ಭಾಗದಿಂದಲೇ ಹೋಗುತ್ತದೆ. ಆದರೆ, ಇದೀಗ ಮಹಾರಾಷ್ಟ್ರ ಸರ್ಕಾರ ಅಡಿಕೆ ಬೆಳೆಯಲ್ಲಿ ವಿಷಕಾರಿ ರಾಸಾಯನಿಕವಿದೆ ಎಂದು ಸಬೂಬು ಹೇಳಿ ತಮ್ಮ ರಾಜ್ಯದ ಜೊತೆ ಇತರೆ ರಾಜ್ಯಕ್ಕೆ ತೆರಳುವ ಅಡಿಕೆಯನ್ನು ಸಹ ತಡೆಹಿಡಿದಿದೆ. ಹೀಗಾಗಿ, ಪ್ರತಿ ದಿನ ಕೋಟ್ಯಂತರ ರೂಪಾಯಿಯನ್ನು ಬೆಳೆಗಾರರಿಗೆ ಅಡಿಕೆ ವರ್ತಕರು ವಹಿವಾಟಿನಲ್ಲಿ ನೀಡುತ್ತಿದ್ದು, ಇದೀಗ ಬೆಳೆಗಾರರಿಗೆ ತಾವು ನೀಡಿದ ಬೆಳೆಗೆ ಹಣ ಸಿಗದೇ ಕಾಯುವಂತಾಗಿದ್ದು, ದರ ಇಳಿಕೆಯ ಬಿಸಿ ಮುಟ್ಟಿದೆ. ಅಡಿಕೆ ಬೆಳಗಾರರು ಹಾಗೂ ವರ್ತಕರನ್ನ ಸಂಕಷ್ಟಕ್ಕೆ ನೂಕಿದೆ.

ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿಗಳನ್ನ ತಡೆಯುತ್ತಿರುವುದರಿಂದ ರೈತರು, ಕೂಲಿ ಕಾರ್ಮಿಕರು, ವ್ಯಾಪಾರಿಗಳು, ಸಾಗಣೆದಾರರು, ಸಂಸ್ಕರಣಾ ಘಟಕಗಳು ಸೇರಿದಂತೆ ಹಲವು ಉದ್ಯಮಕ್ಕೆ ಹೊಡೆತ ಬಿದ್ದಿದೆ. ಇದರಿಂದ ಸಾಗಾಣಿಕೆದಾರರು ಸಧ್ಯ ಅಡಿಕೆಯನ್ನು ಮಹಾರಾಷ್ಟ್ರದ ಮೂಲಕ ಸಾಗಾಟವನ್ನು ನಿಲ್ಲಿಸಿ ಪರ್ಯಾಯ ಮಾರ್ಗದ ಮೂಲಕ ಸಾಗಾಟ ಮಾಡುತ್ತಿದ್ದು, ಇಂದಿನ ದುಬಾರಿ ಡೀಸೆಲ್ ಬೆಲೆಯಿಂದ ಸಾಗಾಟ ವೆಚ್ಚ ದುಪ್ಪಟ್ಟಾಗಿದೆ. ಹೀಗಾಗಿ, ಸಧ್ಯ ಈ ಸಮಸ್ಯೆ ಬಗೆಹರಿಯುವ ವರೆಗೆ ಕೆಲವು ವರ್ತಕರು ವಹಿವಾಟು ಬಂದ್ ಮಾಡಿದ್ದು, ಮಾರುಕಟ್ಟೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ರಾಜ್ಯದ ಅಡಿಕೆ ಬೆಳೆಗಾರರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲೇ ಅಂದಾಜು ಮೂರು ಲಕ್ಷಕ್ಕೂ ಹೆಚ್ಚು ಅಡಿಕೆ ಬೆಳೆಗಾರರಿದ್ದಾರೆ. ಇನ್ನು ಇದರ ಅವಲಂಭಿತ ಕಾರ್ಮಿಕರು ಪ್ರತ್ಯೇಕವಾಗಿದ್ದು, ಜಿಲ್ಲೆಯ ಆರ್ಥಿಕತೆಯ ಮುಖ್ಯ ಮೂಲಸಹ. ರಾಜ್ಯದ ಇತರ ಜಿಲ್ಲೆಯ ಪಾಲು ಸಹ ದೊಡ್ಡದಿದೆ. ಹೀಗಿರುವಾಗ ರಾಜ್ಯ ಸರ್ಕಾರ ಸಹ ಮಹಾರಾಷ್ಟ್ರದ ಈ ನಿರ್ಧಾರವನ್ನು ಪ್ರಶ್ನಿಸದೇ ಸುಮ್ಮನಿದೆ. ಹೀಗಾಗಿ ಅಡಿಕೆ ಬೆಳೆಗಾರರು ಹಾಗೂ ವರ್ತಕರು ಸರ್ಕಾರ ಮಧ್ಯಸ್ತಿಕೆ ವಹಿಸಿ ಆದ ಗೊಂದಲ ಬಗೆಹರಿಸಿ ನಮ್ಮ ಹಿತ ಕಾಯಬೇಕೆಂದು ಬೆಳೆಗಾರರು ಆಗ್ರಹಿಸಿದ್ದಾರೆ.