ಬೆಂಗಳೂರು: ತಡರಾತ್ರಿ ವಕೀಲರೊಬ್ಬರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಹಣೆಗೆ ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಂದೂರು ಅಗ್ರಹಾರದಲ್ಲಿ ಅ.18 ರ ರಾತ್ರಿ ಸುಮಾರು 11.30ರ ವೇಳೆಗೆ ನಡೆದಿದೆ.
Sponsoredಮಂಜುನಾಥ್ ಕೊಲೆಯಾದ ವ್ಯಕ್ತಿ.
ಮಂಜುನಾಥ್ ವಕೀಲರಾಗಿದ್ದು, ಕೋಟಿಗಟ್ಟಲೆ ಮೌಲ್ಯದ ಆಸ್ತಿ, ಹತ್ತಾರು ಎಕರೆ ಜಮೀನು ಹೊಂದಿದ್ದರು. ತಮ್ಮ ಜಮೀನಿನಲ್ಲಿದ್ದ ಶೆಡ್‌ಗಳನ್ನು ಅವರು ಬಾಡಿಗೆಗೆ ನೀಡಿದ್ದರು. ಕೊಲೆಗೂ ಒಂದು ಗಂಟೆ ಮೊದಲು ಶೆಡ್‌ಗಳ ಬಾಡಿಗೆ ನೀಡುವ ವಿಷಯಕ್ಕೆ ಮಂಜುನಾಥ್ ಹಾಗೂ ಬಾಡಿಗೆದಾರರ ನಡುವೆ ಗಲಾಟೆ ನಡೆದಿತ್ತು. ಈ ಗಲಾಟೆಯ ಬೆನ್ನಲ್ಲೇ ರಾತ್ರಿ 11.30ರ ಸುಮಾರಿಗೆ ಇಬ್ಬರು ಯುವಕರು ಮಂಜುನಾಥ್ ಮನೆ ಬಳಿ ಬಂದು, ಮನೆ ಬಾಗಿಲು ಬಡಿದು ಮಂಜುನಾಥ್ ಅವರನ್ನು ಕರೆದಿದ್ದು, ಏಕಾಏಕಿ ಹಣೆಗೆ ಒಂದು ಸುತ್ತು ಗುಂಡು ಹಾರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಮಂಜುನಾಥ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ವೈಟ್‌ಫೀಲ್ಡ್ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಜಮೀನು ವ್ಯಾಜ್ಯ, ಬಾಡಿಗೆದಾರರೊಂದಿಗಿನ ವೈಷಮ್ಯವೇ ಈ ಭೀಕರ ಕೊಲೆ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಹಂತಕರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.




