ಶನಿವಾರ, 24 ಅಕ್ಟೋಬರ್ 2026

ನಿಮ್ಮ ಸಮವಸ್ತ್ರ ಬಿಚ್ಚಿಸ್ತೀನಿ – ಉಲ್ಲಾಳ ಠಾಣೆ ಇನ್‌ಸ್ಪೆಕ್ಟರ್‌ಗೆ ಹೈಕೋರ್ಟ್‌ ವಾರ್ನಿಂಗ್

ನಿಮ್ಮ ಸಮವಸ್ತ್ರ ಬಿಚ್ಚಿ ನಿಲ್ಲಿಸ್ತೀವಿ ಎಂದು ಕರ್ನಾಟಕ ಹೈಕೋರ್ಟ್ ಉಲ್ಲಾಳ ಠಾಣೆ ಇನ್‌ಸ್ಪೆಕ್ಟರ್‌ಗೆ ಖಡಕ್ ಎಚ್ಚರಿಕೆ ನೀಡಿದ ಘಟನೆ ನಡೆದಿದೆ.

ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಬೆಂಗಳೂರು ಮೂಲದ ಝೈಟ್ ಇಂಟೀರಿಯರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವಿರುದ್ಧ ಎಲೆಕ್ಟ್ರಿಕಲ್ ಗುತ್ತಿಗೆದಾರ ಸುನೀಲ್ ಕುಮಾರ್ ಪೈ ಅವರು ದೂರು ನೀಡಿದ್ದರು. ವಾಣಿಜ್ಯ ಕಟ್ಟಡದ ವಿದ್ಯುತ್ ಕಾಮಗಾರಿ ಪೂರ್ಣಗೊಳಿಸಿದರೂ ಒಪ್ಪಂದದಂತೆ ₹60,39,046 ಪಾವತಿಸಿಲ್ಲ ಎಂದು ಆರೋಪಿಸಿದ್ದರು. ದೂರು ಆಧರಿಸಿ ಉಳ್ಳಾಲ ಠಾಣೆ ತನಿಖಾಧಿಕಾರಿ ವಿರೂಪಾಕ್ಷಯ್ಯ ಅವರು ಕಂಪನಿಯ ನಿರ್ದೇಶಕರು ಮತ್ತು ಸಿಬ್ಬಂದಿಯ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿದ್ದರು. ಹೀಗಾಗಿ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರ ಪೀಠ,ತನಿಖಾಧಿಕಾರಿ ವಿರೂಪಾಕ್ಷಯ್ಯ ಅವರಿಗೆ ಛೀಮಾರಿ ಹಾಕಿದ ಹೈಕೋರ್ಟ್‌, 28 ವರ್ಷ ಸೇವೆ ಸಲ್ಲಿಸಿದ್ದೀರಿ ಎಂದು ಕಂಪನಿಯ ಬ್ಯಾಂಕ್‌ ಖಾತೆ ನಿರ್ಬಂಧಿಸಿದ್ದೀರಿ. ಈ ನ್ಯಾಯಾಲಯ ಅಮಾನತು ಆದೇಶ ಮಾಡಿದರೆ, ನಿಮ್ಮ ಪೊಲೀಸ್‌ ಸಮವಸ್ತ್ರ್ರವೇ ಇರುವುದಿಲ್ಲ. ಉಳಿದ ಸೇವಾ ಅವಧಿಯನ್ನು ಸರ್ವೀಸ್‌ ಮ್ಯಾಟರ್‌ ಮುಂದಿಟ್ಟುಕೊಂಡು ಕೋರ್ಟ್‌ಗೆ ಸುತ್ತಾಡುತ್ತಾ ಮುಗಿಸಬೇಕಾಗುತ್ತದೆ. ಸಮವಸ್ತ್ರ ಇಲ್ಲವಾದರೆ ಏನಾಗುತ್ತದೆ ಗೊತ್ತಲ್ಲ. ನೀವೇ ಹಾಲು-ಬಿಸ್ಕೆಟ್‌ ಹಾಕಿ ಪೋಷಿಸಿದ ನಿಮ್ಮ ಮನೆಯ ನಾಯಿ ಸಹ ನಿಮ್ಮನ್ನು ಮೂಸುವುದಿಲ್ಲ. ಮನೆ ಹತ್ತಿರ ಹೋದರೆ ನಾಯಿ, ನಿಮ್ಮನ್ನು ನೋಡಿ ಬೊಗಳುತ್ತದೆ. ಅಮಾನತು ಮಾಡಿ, ನಿಮ್ಮ ಪೊಲೀಸ್‌ ಕ್ಯಾಪ್‌, ಯೂನಿಫಾರಂ ಮೇಲಿನ ಸ್ಟಾರ್‌ ಇಳಿಸಲೇ ಎಂದು ಚಾಟಿ ಬೀಸಿತು.

ಕಂಪನಿ ಪರ ಹಿರಿಯ ವಕೀಲ ಪಿ.ಪಿ. ಹೆಗ್ಡೆ ಅವರು ವಾದ ಮಂಡಿಸಿ, ಗುತ್ತಿಗೆದಾರರಿಗೆ ಈಗಾಗಲೇ ₹50,11,983 ಪಾವತಿಸಲಾಗಿದೆ ಎಂಬ ಸತ್ಯವನ್ನು ಮರೆಮಾಚಿ ದೂರು ನೀಡಲಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಇದು ಸಿವಿಲ್ ವ್ಯಾಜ್ಯವಾಗಿದ್ದು, ಪೊಲೀಸರು ಕ್ರಿಮಿನಲ್ ಪ್ರಕರಣವಾಗಿ ಪರಿವರ್ತಿಸಿದ್ದಾರೆ ಎಂದು ಆರೋಪಿಸಿದರು.

ಬಳಿಕ ಸಮವಸ್ತ್ರ ಹಾಕಿಕೊಂಡು ವಸೂಲಿಗೆ ಇಳಿದಿದ್ದೀರಾ? ಪೊಲೀಸರು ನಿಮ್ಮ ಪವರ್‌ ತೋರಿಸಿದರೆ, ಕೋರ್ಟ್‌ ಪವರ್‌ ನಾನು ತೋರಿಸಲೇ? ಈ ಕೂಡಲೇ ಮಂಗಳೂರು ಪೊಲೀಸ್‌ ಆಯುಕ್ತರು ಮತ್ತು ತನಿಖಾಧಿಕಾರಿಯನ್ನು ಅಮಾನತುಪಡಿಸಲು ಸರ್ಕಾರಕ್ಕೆ ಆದೇಶಿಸಲೇ ಎಂದು ಪ್ರಶ್ನಿಸಿದರು.

ತನಿಖಾಧಿಕಾರಿ ವಿರೂಪಾಕ್ಷಯ್ಯ ಅವರನ್ನು ಸೇವೆಯಿಂದ ಅಮಾನತು ಮಾಡಲು ನಿರ್ಧರಿಸಿ ಆದೇಶ ಬರೆಯಲು ಮುಂದಾಗಿದ್ದ ಪೀಠ, ನಂತರ ರಾಜ್ಯ ಸರ್ಕಾರಿ ಅಭಿಯೋಜಕರು ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತರು ನೀಡಿದ ಭರವಸೆ ಹಿನ್ನೆಲೆಯಲ್ಲಿ ನಿರ್ಧಾರದಿಂದ ಹಿಂದೆ ಸರಿಯಿತು. ಹೀಗಾಗಿ ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದ್ದು, ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ಮುಂದೂಡಲಾಗಿದೆ.