ಲಕ್ನೋ: 2027ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಥವಾ ಬಿಜೆಪಿಯಿಂದ ಸ್ಪರ್ಧಿಸುವ ಸಲುವಾಗಿ ಕೊಲೆ ಅಪರಾಧಿಯೊಬ್ಬರು ಶಿಕ್ಷೆ ತಡೆಗೆ ಸಲ್ಲಿಸಿದ ಅರ್ಜಿಯನ್ನು ಪರಿಗಣನೆ ಮಾಡಿ, ಅಲಹಾಬಾದ್ ಹೈಕೋರ್ಟ್ ಅಪರಾಧಿಯ ಜೀವಾವಧಿ ಶಿಕ್ಷೆಗೆ ತಾತ್ಕಾಲಿಕ ತಡೆ ನೀಡಿದೆ.
Sponsoredರಾಮ ಜನ್ಮಭೂಮಿ ಚಳವಳಿಯ ಸದಸ್ಯ ಪ್ರಮೋದ್ ಕುಮಾರ್ ನಿಗಮ್ ಹತ್ಯೆ ಪ್ರಕರಣದಲ್ಲಿ ನಂದನ್‌ಲಾಲ್ ರೈ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 2025 ರಲ್ಲಿ ವಾರಾಣಾಸಿ ಕೋರ್ಟ್ ನಂದನ್ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಚುನಾವಣೆಯ ಹಿನ್ನೆಲೆಯಲ್ಲಿ ನಂದನ್ ಜಾಮೀನಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಜೊತೆಗೆ ತಮ್ಮ ವಿರುದ್ಧ ಊಹಾಪೋಹ ಹಾಗೂ ಶಂಕೆಯ ಆಧಾರದಲ್ಲಿ ದೋಷಾರೋಪ ಹೊರಿಸಲಾಗಿದೆ ಎಂದು ವಾದಿಸಿದ್ದಾರೆ.
ನಂದನ್ ರಾಜಕೀಯವಾಗಿ ಸಕ್ರಿಯ ವ್ಯಕ್ತಿ. 2027 ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಇಲ್ಲವೇ ಬಿಜೆಪಿಯಿಂದ ಸ್ಪರ್ಧೆ ಮಾಡಲು ನಂದನ್ ಇಚ್ಛಿಸಿದ್ದಾರೆ ಎನ್ನುವ ವಾದವನ್ನು ವಕೀಲರು ಮುಂದಿಟ್ಟಿದ್ದು, ವಾದ ಪರಿಗಣಿಸಿದ ಪೀಠ ಅರ್ಜಿದಾರರು ಜಾಮೀನು ಪಡೆಯಲು ಅರ್ಹರು. ಈ ಪ್ರಕರಣದ ಅಂತಿಮ ತೀರ್ಪನ್ನು ಕೇಳಲು ಅರ್ಜಿದಾರರು ಉಳಿಯಬೇಕಿದ್ದು, ಅದಕ್ಕಾಗಿ ಅವರ ಶಿಕ್ಷೆ ತಡೆ ಅಗತ್ಯ ಎಂದು ಪೀಠ ಘೋಷಿಸಿದೆ.




