ಶನಿವಾರ, 24 ಅಕ್ಟೋಬರ್ 2026

ಹಾಸ್ಟೆಲ್ ನಲ್ಲಿ ದೆವ್ವದ ಕಾಟ? ರಾತ್ರಿ ಹೋಗಿ ವಿದ್ಯಾರ್ಥಿಗಳ ಜೊತೆಗೆ ನಿದ್ರಿಸಿದ ಜಿಲ್ಲಾಧಿಕಾರಿ!!

ಮಹಾರಾಷ್ಟ್ರದ ವಿದ್ಯಾರ್ಥಿಗಳ ಹಾಸ್ಟೆಲ್ ಒಂದರಲ್ಲಿ ದೆವ್ವ ಇದೆ, ವಿಚಿತ್ರ ಶಬ್ದಗಳು ಕೇಳಿಸುತ್ತಿವೆ ಎಂಬ ವದಂತಿ ಕೇಳಿಬಂದ ಹಿನ್ನಲೆಯಲ್ಲಿ  ಭಯಭೀತರಾದ ನೂರಾರು ವಿದ್ಯಾರ್ಥಿಗಳು ಹಾಸ್ಟೆಲ್ ತೊರೆದು ಮನೆಗೆ ಓಡಿಹೋಗಿದ್ದಾರೆ. ಇವ್ರೆಲ್ಲರ ಭಯ ಓಡಿಸಲು ಸ್ವತಃ ಜಿಲ್ಲಾಧಿಕಾರಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳೇ ಅದೇ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ರಾತ್ರಿ ಕಳೆದಿದ್ದಾರೆ.

ಅಮರಾವತಿ ಜಿಲ್ಲೆಯ ದೂರದ ಆದಿವಾಸಿ ಪ್ರದೇಶದಲ್ಲಿರುವ ಡೋಮಾ ಗ್ರಾಮದ ಸರ್ಕಾರಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಹಾಸ್ಟೆಲ್‌ನಲ್ಲಿ ಕೆಲವು ವಿದ್ಯಾರ್ಥಿನಿಯರು ವಿಚಿತ್ರ ಅನುಭವಗಳ ಬಗ್ಗೆ ಹೇಳಿಕೊಂಡ ಬಳಿಕ ದೆವ್ವದ ವದಂತಿ ಹರಡಿತ್ತು. ರಾತ್ರಿ ವೇಳೆ ಕಾಲ್ಗೆಜ್ಜೆಯ ಶಬ್ದ, ನಗು, ಅಳು ಸೇರಿದಂತೆ ವಿಚಿತ್ರ ಶಬ್ದಗಳು ಕೇಳಿಸುತ್ತಿವೆ ಎಂದು ಕೆಲ ವಿದ್ಯಾರ್ಥಿಗಳು ಹೇಳಿಕೊಂಡಿದ್ದರು. ಇದರಿಂದ ಹಾಸ್ಟೆಲ್‌ನಲ್ಲಿದ್ದ ಸುಮಾರು 850 ವಿದ್ಯಾರ್ಥಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿ ಕೆಲವು ವಿದ್ಯಾರ್ಥಿಗಳು ಹಾಸ್ಟೆಲ್ ತೊರೆದು ಮನೆಗೆ ಓಡಿ ಹೋಗಿದ್ದರು. ಕೆಲವು ವಿದ್ಯಾರ್ಥಿನಿಯರು ವಿಚಿತ್ರ ರೀತಿಯಲ್ಲಿ ವರ್ತಿಸುತ್ತಿದ್ದಾರೆ, ಯಾರೋ ತಮ್ಮನ್ನು ‘ಆವರಿಸಿಕೊಂಡಿದ್ದಾರೆ’ ಎಂಬ ರೀತಿಯ ಮಾತುಗಳೂ ಹರಡಿದ್ದವು. ಇದರಿಂದ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿತ್ತು.

 ವಿದ್ಯಾರ್ಥಿಗಳ ಈ ವಿಚಿತ್ರ ವರ್ತನೆಯನ್ನು ಕಂಡು ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಹಾಗೂ ವೈದ್ಯರನ್ನು ಕಳುಹಿಸಿ ತಪಾಸಣೆ ನಡೆಸಲಾಗಿತ್ತು ಆದರೆ ಯಾವುದೇ ಸಮಸ್ಯೆಗಳು ಕಂಡುಬಂದಿರಲಿಲ್ಲ. ವದಂತಿಯಿಂದ ವಿದ್ಯಾರ್ಥಿಗಳಲ್ಲಿ ಮೂಡಿದ್ದ ಭಯವನ್ನು ಕೇವಲ ಹೇಳಿಕೆಗಳ ಮೂಲಕ ಹೋಗಲಾಡಿಸಲು ಸಾಧ್ಯವಿಲ್ಲ ಎಂದು ಅರಿತ ಅಧಿಕಾರಿಗಳು ವಿಭಿನ್ನ ಹೆಜ್ಜೆ ಇಟ್ಟರು. ಅಮರಾವತಿ ಜಿಲ್ಲಾಧಿಕಾರಿ ಆಶಿಶ್ ಯೆರೆಕರ್, ಜಿಲ್ಲಾ ಪಂಚಾಯತ್ ಸಿಇಒ ಸತ್ಯಂ ಗಾಂಧಿ ಮತ್ತು ಪೊಲೀಸ್ ಅಧೀಕ್ಷಕ ನಿಕೇತನ್ ಕದಂ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಸ್ಟೆಲ್‌ನಲ್ಲೇ ರಾತ್ರಿ ಕಳೆದಿದ್ದಾರೆ. ಅಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಊಟ ಮಾಡಿದರು, ಅವರೊಂದಿಗೆ ಸಮಯ ಕಳೆದರು ಮತ್ತು ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದ್ದಾರೆ. 

ಅಧಿಕಾರಿಗಳ ಈ ಕ್ರಮದ ಬಳಿಕ ಹಾಸ್ಟೆಲ್‌ನ ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳತೊಡಗಿತು. ವದಂತಿ ಕಡಿಮೆಯಾಗಿದ್ದರೂ, ಎಲ್ಲಾ ವಿದ್ಯಾರ್ಥಿಗಳು ತಕ್ಷಣವೇ ಹಾಸ್ಟೆಲ್‌ಗೆ ಮರಳಿಲ್ಲ. ವರದಿಯ ಪ್ರಕಾರ, ಕೆಲವು ವಾರಗಳ ಬಳಿಕವೂ ಸುಮಾರು 350 ವಿದ್ಯಾರ್ಥಿಗಳು ಗೈರಾಗಿದ್ದರು. ಇದಕ್ಕೆ ಹಬ್ಬದ ಸಮಯ ಮತ್ತು ರಜೆಗಳೂ ಒಂದು ಕಾರಣವಾಗಿರಬಹುದು ಎಂದು ಶಾಲಾ ಆಡಳಿತ ತಿಳಿಸಿದೆ.