ಶನಿವಾರ, 24 ಅಕ್ಟೋಬರ್ 2026

ಮೋದಿ ಸಂಪುಟ ಪುನಾರಚನೆ- 70 ವರ್ಷ ದಾಟಿದ 14 ಸಚಿವರಿಗೆ ಕೊಕ್?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಮತ್ತೊಂದು ಮಹತ್ವದ ಪುನರ್‌ರಚನೆ ನಡೆಯುವ ಸಾಧ್ಯತೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ತೀವ್ರಗೊಂಡಿದೆ. ಮುಂದಿನ ವಾರವೇ ಸಚಿವ ಸಂಪುಟ ಪುನರ್ ರಚನೆಯಾಗಲಿದ್ದು 70 ವರ್ಷ ದಾಟಿದ ಸುಮಾರು 14 ಸಚಿವರಿಗೆ ಕೋಕ್ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಿರಿಯ ಸಚಿವರಿಗೆ ಕೊಕ್?

ವರದಿಗಳ ಪ್ರಕಾರ, 70 ವರ್ಷ ಮೇಲ್ಪಟ್ಟ ಸುಮಾರು 14 ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅವರ ಸ್ಥಾನಕ್ಕೆ ಯುವ ಹಾಗೂ ಹೊಸ ಮುಖಗಳಿಗೆ ಅವಕಾಶ ನೀಡುವ ಬಗ್ಗೆ ಬಿಜೆಪಿ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಕೇಂದ್ರ ಸಂಪುಟದಲ್ಲಿ ಹಲವು ಸಚಿವರು ಒಂದಕ್ಕಿಂತ ಹೆಚ್ಚು ಖಾತೆಗಳ ಜವಾಬ್ದಾರಿ ಹೊತ್ತಿರುವ ಹಿನ್ನೆಲೆಯಲ್ಲಿ, ಪುನಾರಚನೆ ವೇಳೆ ಖಾತೆಗಳ ಮರುಹಂಚಿಕೆಗೂ ಆದ್ಯತೆ ಸಿಗಬಹುದು. ಯುವಕರು, ಮಹಿಳೆಯರು ಹಾಗೂ ವಿವಿಧ ರಾಜ್ಯಗಳಿಗೆ ಪ್ರಾತಿನಿಧ್ಯ ನೀಡುವ ಅಂಶಗಳು ಕೂಡ ಪ್ರಮುಖವಾಗಬಹುದು.

ಸಂಪುಟ ಪುನರ್‌ರಚನೆಯಲ್ಲಿ ಪೀಳಿಗೆಯ ಬದಲಾವಣೆ ಪ್ರಮುಖ ಅಂಶವಾಗುವ ಸಾಧ್ಯತೆ ಇದೆ. 2024ರಲ್ಲಿ ಮೋದಿ 3.0 ಸರ್ಕಾರ ಅಧಿಕಾರಕ್ಕೆ ಬಂದಾಗ ಸಚಿವರ ಪೈಕಿ ಶೇ.65ಕ್ಕೂ ಹೆಚ್ಚು ಮಂದಿ 51ರಿಂದ 70 ವರ್ಷದೊಳಗಿನವರಾಗಿದ್ದರು. ಸುಮಾರು ಶೇ.24ರಷ್ಟು ಮಂದಿ 31–50ರ ವಯೋಮಾನದವರಾಗಿದ್ದರು. ಈಗ 70 ವರ್ಷ ಮೇಲ್ಪಟ್ಟ ಸಚಿವರೂ ಇದ್ದಾರೆ. ಹೀಗಾಗಿ ಅನುಭವ ಹೊಂದಿರುವ ಹಿರಿಯ ನಾಯಕರ ಜತೆಗೆ ಯುವ ಸಂಸದರಿಗೆ ಹೆಚ್ಚಿನ ಜವಾಬ್ದಾರಿ ನೀಡುವ ಚಿಂತನೆ ಇದೆ ಎನ್ನಲಾಗಿದೆ. ಇದು ಕೇವಲ ವಯಸ್ಸಿನ ಆಧಾರದ ಬದಲಾವಣೆ ಆಗದೆ, ಮುಂದಿನ ಒಂದು ದಶಕದ ಬಿಜೆಪಿ ನಾಯಕತ್ವವನ್ನು ರೂಪಿಸುವ ಪ್ರಯತ್ನವಾಗಿಯೂ ಕಾಣಬಹುದು.

ಮಹಿಳೆಯರಿಗೆ ಪ್ರಾತಿನಿಧ್ಯ ಹೆಚ್ಚಳ?

ಸಂಪುಟ ಪುನರ್‌ರಚನೆಯಲ್ಲಿ ಮಹಿಳಾ ಪ್ರಾತಿನಿಧ್ಯವೂ ಮತ್ತೊಂದು ಪ್ರಮುಖ ಮಾನದಂಡವಾಗಬಹುದು. ಬಿಜೆಪಿ ತನ್ನ ಸಂಘಟನಾ ತಂಡದಲ್ಲಿ ಮಹಿಳೆಯರು, ಯುವಕರು ಹಾಗೂ ವಿವಿಧ ಸಾಮಾಜಿಕ ವರ್ಗಗಳಿಗೆ ಪ್ರಾತಿನಿಧ್ಯ ನೀಡುವ ಪ್ರಯತ್ನ ಮಾಡಿರುವ ಹಿನ್ನೆಲೆಯಲ್ಲಿ, ಸರ್ಕಾರದಲ್ಲೂ ಈ ಸಮತೋಲನವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ಇದೆ.

ಮಿತ್ರಪಕ್ಷಗಳಿಗೂ ಹೆಚ್ಚುವರಿ ಸ್ಥಾನ?

ಮೋದಿ 3.0 ಸರ್ಕಾರವು ಎನ್‌ಡಿಎ ಮೈತ್ರಿಕೂಟದ ಆಧಾರದ ಮೇಲೆ ಮುಂದುವರಿಯುತ್ತಿರುವುದರಿಂದ ಸಂಪುಟ ಪುನರ್‌ರಚನೆಯಲ್ಲಿ ಮಿತ್ರಪಕ್ಷಗಳ ಪಾತ್ರವೂ ಮಹತ್ವದ್ದಾಗಿದೆ. ವಿಶೇಷವಾಗಿ ಮಹಾರಾಷ್ಟ್ರ, ಪಂಜಾಬ್ ಸೇರಿದಂತೆ ಪ್ರಮುಖ ರಾಜ್ಯಗಳ ರಾಜಕೀಯ ಸಮೀಕರಣಗಳು ಗಮನದಲ್ಲಿರಬಹುದು. 

ಒಟ್ಟಿನಲ್ಲಿ, ಮೋದಿ ಸಂಪುಟ ಪುನಾರಚನೆ ಕುರಿತು ಸದ್ಯಕ್ಕೆ ರಾಜಕೀಯ ವಲಯದಲ್ಲಿ ಚರ್ಚೆಗಳು ಮತ್ತು ಊಹಾಪೋಹಗಳು ಮಾತ್ರ ಇವೆ. ಯಾರು ಸಂಪುಟದಿಂದ ಹೊರಗೆ, ಯಾರಿಗೆ ಹೊಸ ಜವಾಬ್ದಾರಿ, ಕರ್ನಾಟಕಕ್ಕೆ ಎಷ್ಟು ಪ್ರಾತಿನಿಧ್ಯ ಎಂಬುದು ಕೇಂದ್ರ ಸರ್ಕಾರದ ಅಧಿಕೃತ ನಿರ್ಧಾರದ ಬಳಿಕವಷ್ಟೇ ಸ್ಪಷ್ಟವಾಗಲಿದೆ.