ಬಿಡದಿ ಟೌನ್‌ಶಿಪ್ ಸರ್ವೆಗೆ ಬಂದ ಅಧಿಕಾರಿಗಳನ್ನು ಪೊರಕೆಯಲ್ಲಿ ಹೊಡೆದು ಓಡಿಸಿದ ರೈತ ಮಹಿಳೆಯರು !!
ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಗದ್ದಲ – ಗಲಾಟೆ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ವಿರೋಧದ ನಡುವೆಯೂ ಬಿಡದಿ ತಾಲೂಕಿನ ಮಂಡಲಹಳ್ಳಿ ಗ್ರಾಮದಲ್ಲಿ ಜೆಎಂಸಿ ಸರ್ವೆಗೆ ಮುಂದಾದ ಜಿಬಿಡಿಎ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದು, ಪೊರಕೆ ಏಟು ನೀಡಿ ಕಳಿಸಿದ್ದಾರೆ.
Sponsoredಬಿಡದಿ ಟೌನ್‌ಶಿಪ್ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಆಗಿರುವ ಮೂರು ಹಳ್ಳಿಗಳ ಸರ್ವೆ ಮಾಡಲು ಇಂದು ಅಧಿಕಾರಿಗಳು ಬಂದಿದ್ದರು. ಆದ್ರೆ ಸರ್ವೇಗೆ ಬಂದಿದ್ದ ಅಧಿಕಾರಿಗಳಿಗೆ ರೈತ ಮಹಿಳೆಯರು ಪೊರಕೆಯಲ್ಲಿ ಹೊಡೆದು ವಾಪಸ್ ಕಳಿಸಿದ ಘಟನೆ ಬಿಡದಿ ತಾಲೂಕಿನ ಮಂಡಲಹಳ್ಳಿಯಲ್ಲಿ ಸೋಮವಾರ ನಡೆದಿದೆ. ಈ ಕುರಿತಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸರ್ವೆಗೆ ಬಂದ ಅಧಿಕಾರಿಗಳ ಕಾರುಗಳನ್ನು ರೈತ ಮಹಿಳೆಯರು ಸುತ್ತುವರಿದು, ಪೊರಕೆಯಿಂದ ಹೊಡೆದಿದ್ದಾರೆ. ಈ ವೇಳೆ ಅಧಿಕಾರಿಗಳ ಕಾರುಗಳಿಗೆ ಕೆಲವರು ಕಲ್ಲೆಸೆದಿದ್ದು ವಾಹನಗಳ ಗಾಜುಗಳು ಪುಡಿಪುಡಿಯಾಗಿವೆ. ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಪೊಲೀಸರನ್ನು ಲೆಕ್ಕಿಸದೇ ರೈತರು ಅಧಿಕಾರಿಗಳ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು, ರೈತರ ಬಳಿ ಬಂದು ಸಮಾಲೋಚನೆ ಮಾಡಬೇಕು. ಇಲ್ಲ ಎಂದರೆ ರಾಜ್ಯದ ಪ್ರತಿಯೊಬ್ಬ ರೈತ ಬಿಡದಿ ರೈತರ ಜೊತೆ ನಿಲ್ಲುತ್ತಾನೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ ಟಿ ಎಚ್ಚರಿಕೆ ನೀಡಿದ್ದಾರೆ.




