ಮಂಡ್ಯದ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯೊಬ್ಬ ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ, ತನ್ನ ಗೆಳತಿಯೊಂದಿಗೆ ಇರುವುದು ಪತ್ತೆಯಾಗಿದೆ. ಹೇಗಾಗಿ ಕರ್ತವ್ಯಲೋಪವಾಗಿದೆ ಎಂಬ ಆರೋಪದ ಮೇರೆಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೆಬಲ್ ಚಂದನ್ ಅವರನ್ನು ಅಮಾನತು ಮಾಡಲಾಗಿದೆ.
Sponsoredನ್ಯಾಯಾಂಗ ಬಂಧನದಲ್ಲಿದ್ದ ಮಹಮ್ಮದ್ ಹುಸೇನ್‌ನನ್ನು ನ್ಯಾಯಾಧೀಶರ ಅನುಮತಿ ಪಡೆಯದೆ ಆರೋಪಿ ಮಹಮ್ಮದ್ ಹುಸೇನ್ ಬೆನ್ನುನೋವಿನ ಚಿಕಿತ್ಸೆ ನೆಪದಲ್ಲಿ ಕಾರಾಗೃಹದಿಂದ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಆಗಸ್ಟ್ 21ರಂದು ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಸಿ.ಚಂದ್ರಶೇಖರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ ಶೆಟ್ಟಿ ಅವರ ತಂಡ ಸೋಮವಾರ ಮಿಮ್ಸ್ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿದ್ದ ವೇಳೆ ಆತ ಗೆಳತಿಯೊಂದಿಗೆ ಆಸ್ಪತ್ರೆಯ ಪ್ರತ್ಯೇಕ ಕೋಣೆಯಲ್ಲಿ ಕಾಲ ಕಳೆಯುತ್ತಿದ್ದ. ಈ ಹಿನ್ನೆಲೆಯಲ್ಲಿ ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದ ಕಾನ್‌ಸ್ಟೆಬಲ್ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ. ಶೋಭಾರಾಣಿ ಶಿಸ್ತುಕ್ರಮ ಜರುಗಿಸಿದ್ದಾರೆ.
Marriage AdSponsoredಅಲ್ಲದೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಶಿವಕುಮಾರ್ ಅವರನ್ನು ನ್ಯಾಯಾಧೀಶರು ವಿಚಾರಿಸಿದಾಗ, ‘ಆರೋಪಿ ಒತ್ತಾಯಪೂರ್ವಕಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇರುವುದಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.
ಸ್ಥಳದಲ್ಲಿದ್ದ ಕಾರಾಗೃಹದ ಅಧೀಕ್ಷಕಿ ಶಾಂತಮ್ಮ ಅವರನ್ನು ವಿಚಾರಿಸಿದಾಗ, ‘ಜೈಲಿನ ವೈದ್ಯಾಧಿಕಾರಿ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಾಹಿತಿಯನ್ನು ನ್ಯಾಯಾಲಯಕ್ಕೆ ತಿಳಿಸಿಲ್ಲ. ಇನ್ನು ಮುಂದೆ ತಿಳಿಸುತ್ತೇವೆ’ ಎಂದು ಉತ್ತರ ನೀಡಿದ್ದಾರೆ. ನ್ಯಾಯಾಲಯದ ಅನುಮತಿ ಪಡೆಯದೆ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ನ್ಯಾಯಾಧೀಶರು ಕಿಡಿಕಾರಿದ್ದಾರೆ.
ಈ ಬಗ್ಗೆ ಕಾರಾಗೃಹದ ಅಧೀಕ್ಷಕರು ಮತ್ತು ಮಿಮ್ಸ್ ಆಸ್ಪತ್ರೆಯ ಅಧೀಕ್ಷಕರು ವರದಿ ನೀಡುವಂತೆ ಸೂಚಿಸಿದ್ದಾರೆ. ವರದಿ ಬಂದನ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.




